ಚಿಕ್ಕಬಳ್ಳಾಪುರ: ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಬಾರ್ ಕ್ಯಾಶಿಯರ್ ಹಾಗೂ ವ್ಯಕ್ತಿಯೊಬ್ಬನ ನಡುವೆ ಹಿಂದೆ ನಡೆದಿದ್ದ ಗಲಾಟೆ ಇಂದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ. ತಾಲೂಕಿನ ಚಿಲಕಲನೇರ್ಪು ಹೋಬಳಿ ಬುಡುಗುಂಟೆ ಗ್ರಾಮದ ಚಲಪತಿ ಎಂಬವರ ಪುತ್ರ ಹೇಮಂತ್ ಕುಮಾರ್ (25) ಕೊಲೆಗೀಡಾದವರು.
ಗುರುವಾರ ರಾತ್ರಿ ಬಾರ್ ಕ್ಯಾಶಿಯರ್ ಹಾಗೂ ಹೇಮಂತ್ ಕುಮಾರ್ ನಡುವೆ ಜಗಳ ನಡೆದಿದೆ. ಶುಕ್ರವಾರ ಮಧ್ಯಾಹ್ನದ ವೇಳೆ ಮತ್ತೆ ವಾಗ್ಯುದ್ಧ ಶುರುವಾಗಿ ಬಾರ್ ಸಮೀಪದ ಹೆಚ್‌ಪಿ ಪೆಟ್ರೋಲ್ ಬಂಕ್‌ನ ಕೊಠಡಿಯೊಂದರಲ್ಲಿ ಹೇಮಂತ್‌ನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಹೇಮಂತ್ ವರ್ಷದ ಹಿಂದೆ ಇದೇ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಘಟನಾ ಸ್ಥಳಕ್ಕೆ ಎಸ್ಪಿ ನಾಗೇಶ್ ಹಾಗೂ ನಗರ ಠಾಣೆಯ ಆರಕ್ಷಕ ನಿರೀಕ್ಷಕ ರಂಗಶಾಮಯ್ಯ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ.
ಈ ಕೊಲೆ ಘಟನೆಗೂ ಹಿಂದೆ ನಡೆದ ಘಟನೆಗೂ ಯಾವುದೇ ಸಂಬಂಧವಿಲ್ಲ. ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಎಸ್ಪಿ ನಾಗೇಶ್ ತಿಳಿಸಿದರು.
ಟ್ರ್ಯಾಕ್ಟರ್ ಡಿಕ್ಕಿ ಹೊಡೆಸಿ ವ್ಯಕ್ತಿ ಕೊಲೆ: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಹತ್ಯೆಗೈದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ರಾಯಚೂರಿನ ದೇವದುರ್ಗ ತಾಲೂಕಿನ ನಿಲವಂಜಿ ಗ್ರಾಮದ ಸಮೀಪ ಕೊಲೆ ನಡೆದಿದೆ. ಮಾರ್ಕಂಡೇಯ (28) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಮಾರ್ಕಂಡೇಯ ಅವರಿಗೆ ಹಿಂದಿನಿಂದ ಟ್ರ್ಯಾಕ್ಟರ್ ಡಿಕ್ಕಿ ಹೊಡೆಸಲಾಗಿದೆ. ಪರಿಣಾಮ ವಾಹನದಿಂದ ಮಾರ್ಕಂಡೇಯ ಕೆಳಗೆ ಬಿದ್ದಿದ್ದು, ತಕ್ಷಣವೇ ಆರೋಪಿಗಳು ಕೊಡಲಿ, ಚಾಕುವಿನಿಂದ ಹತ್ಯೆ ಮಾಡಿದ್ದಾರೆ.
ಮಾರ್ಕಂಡೇಯ ಜೊತೆ ಈ ಹಿಂದೆ ಚುನಾವಣೆ ವಿಚಾರವಲ್ಲದೆ, ಆಗಾಗ್ಗೆ ಸಣ್ಣಪುಟ್ಟ ಜಗಳವಾಗಿತ್ತು. ಅದು ಕೆಲವು ದಿನಗಳಿಂದ ವಿಕೋಪಕ್ಕೆ ತಿರುಗಿದ್ದು, ಗುರುವಾರ ಕೊಲೆಯಲ್ಲಿ ಅಂತ್ಯಗೊಂಡಿದೆ ಎನ್ನಲಾಗುತ್ತಿದೆ. ಹತ್ಯೆಯಾದ ವ್ಯಕ್ತಿಯ ಬೈಕ್ನ ಹಿಂಬದಿ ಸವಾರನಿಗೂ ಸಣ್ಣಪುಟ್ಟ ಗಾಯಗಳಾಗಿದೆ. ಮೃತ ವ್ಯಕ್ತಿಯ ಸಹೋದರಿ ಪತಿ 9 ಜನರ ವಿರುದ್ಧ ದೇವದುರ್ಗ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂಓದಿ: ಶಿವಮೊಗ್ಗ: ಜೈಲಿನೊಳಗೆ ಗಾಂಜಾ, ಮೊಬೈಲ್ ಎಸೆಯಲು ಯತ್ನ, ಇಬ್ಬರ ಸೆರೆ