ಚಿಕ್ಕಬಳ್ಳಾಪುರ: ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ದ್ವಿಚಕ್ರ ವಾಹನ ಸವಾರನೋರ್ವ ಲಾರಿ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಗೌರಿಬಿದನೂರು ನಗರದ ಹಿಂದೂಪುರ ರಸ್ತೆಯಲ್ಲಿ ಸಂಭವಿಸಿದೆ.
ನಗರದ ಗುಂಡಾಪುರ ನಿವಾಸಿ ರಫೀಕ್ (28) ಮೃತ ವ್ಯಕ್ತಿ. ಹಿಂದೂಪುರ ರಸ್ತೆ ಕಲ್ಲೂಡಿ ಬಳಿ ಪಲ್ಸರ್ ವಾಹನದಲ್ಲಿ ಹೋಗುತ್ತಿದ್ದ ವ್ಯಕ್ತಿ ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಲಾರಿಯ ಚಕ್ರಕ್ಕೆ ಸಿಕ್ಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ದ್ವಿಚಕ್ರ ವಾಹನದಲ್ಲಿದ್ದ ಮತ್ತೊಬ್ಬ ಯುವಕ ಕೃಷ್ಣ ಎಂಬಾತನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆತನನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಗ್ರಾಮಾಂತರ ಠಾಣೆಯ ಪಿಎಸ್ಐ ಮೋಹನ್ ಕುಮಾರ್ ಹಾಗೂ ಸಿಪಿಐ ರವಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.