ಚಿಕ್ಕಬಳ್ಳಾಪುರ : ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಕ್ಕೆ ತರದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿ, ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯ ಪದಾಧಿಕಾರಿಗಳು ಜಿಲ್ಲೆಯ ಚಿಂತಾಮಣಿ ಕ್ಷೇತ್ರದ ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸಿದ್ರು.
ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿಯನ್ನು ವಿಧಾನಸಭೆಯಲ್ಲಿ ಅನುಮೋದನೆ ಪಡೆದು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿ ಸೆ.14 ರಂದು ರಾಜ್ಯದ 224 ಶಾಸಕರ ಮನೆ ಮುಂದೆ ಧರಣಿ ನಡೆಸಲು ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಕರೆ ನೀಡಲಾಗಿತ್ತು. ಸದ್ಯ ಅದರಂತೆ ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ ಕೆ ಕೃಷ್ಣಾರೆಡ್ಡಿ ಅವರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.
ರಾಜ್ಯದ ಎಲ್ಲ ಸರ್ಕಾರಗಳು ಮಾದಿಗ ಸಮುದಾಯಕ್ಕೆ ಮೋಸ ಮಾಡಿವೆ. ಸುಪ್ರೀಂಕೋರ್ಟ್ ಸಹ ಒಳ ಮೀಸಲಾತಿ ವರ್ಗೀಕರಣ ಮಾಡಬಹುದು ಎಂದು ಸೂಚಿಸಿದ್ರೂ, ಸರ್ಕಾರಗಳು ಸುಮ್ಮನಿವೆ. ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಹಾಗೂ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಶಾಸಕರು ಮುಂದಿನ ಅಧಿವೇಶನದಲ್ಲಿ ಈ ಕುರಿತು ಒತ್ತಾಯ ಮಾಡಬೇಕು.
ಇಲ್ಲದಿದ್ದರೆ ಮಾದಿಗ ಸಮುದಾಯ ಮುಂದೆ ಮತ ಚಲಾವಣೆಯ ಸಮಯದಲ್ಲಿ ತಕ್ಕ ಪಾಠ ಕಲಿಸಲು ತೀರ್ಮಾನ ಮಾಡಲಾಗಿದೆ ಎಂದು ಜಿಲ್ಲಾ ಅಧ್ಯಕ್ಷ ಎಂ ವಿ ರಾಮಪ್ಪ ಹೇಳಿದ್ದಾರೆ. ನಾವು ಯಾವುದೇ ಜಾತಿಯ ಮೀಸಲಾತಿ ಕಿತ್ತುಕೊಳ್ಳುತಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಎಲ್ಲರಿಗೂ ಮೀಸಲಾತಿ ಸೌಲಭ್ಯ ದೊರೆಯಬೇಕು. ಕೇವಲ ಒಂದೆರಡು ಸಮುದಾಯದವರು ಮಾತ್ರ ಮೀಸಲಾತಿಯ ಲಾಭ ಪಡೆಯುವುದು ಸರಿಯಲ್ಲ ಎಂದರು.