ಚಿಕ್ಕಬಳ್ಳಾಪುರ: ಫ್ಯಾಕ್ಟರಿಯ ಮೇಲ್ಬಾಗದಲ್ಲಿ ಶೀಟ್ ಹಾಕುವ ವೇಳೆ ಕೂಲಿ ಕಾರ್ಮಿಕ ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕುಡುಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ವಾಜಿದ್ (22) ಮೃತ ಯುವಕ. ಕುಡುಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿ ಇರುವಂತಹ ಪ್ರತಿಷ್ಠಿತ A1ಸ್ಟೀಲ್ ಅಲಾಯ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯೊಂದರಲ್ಲಿ ಕಳೆದ ಎರಡು ತಿಂಗಳ ಹಿಂದೆ ಉತ್ತರ ಪ್ರದೇಶದಿಂದ ಕೂಲಿಗಾಗಿ ಬಂದ ವಾಜಿದ್ ಕಟ್ಟಡವೊಂದಕ್ಕೆ ಶೀಟ್ ಹಾಕುವ ವೇಳೆ ಆಯತಪ್ಪಿ ಕೆಳಗೆ ಬಿದ್ದು ತಲೆಗೆ ತೀವ್ರ ಸ್ವರೂಪದ ಗಾಯವಾಗಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಇಂದು ಮಧ್ಯಾಹ್ನ 2 ಗಂಟೆಗೆ ಘಟನೆ ನಡೆದಿದ್ದು ಕಾರ್ಖಾನೆಯ ಸಿಬ್ಬಂದಿ ಆಂಬುಲೆನ್ಸ್ ಮೂಲಕ ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಪರಿಶೀಲಿಸಿದಾಗ ಗಾಯಾಳು ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ. ಸದ್ಯ ಮೃತದೇಹವನ್ನು ಸಾರ್ವಜನಿಕ ಶವಾಗಾರದಲ್ಲಿ ಇಡಲಾಗಿದೆ. ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಠಾಣೆಯ ಪಿಎಸ್ಐ ಮೋಹನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.