ಚಿಂತಾಮಣಿ: ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಭೇಟಿ ಕೊಟ್ಟ ಸಿಟಿಎಂ ಮೊಹಮ್ಮದ್ ಫೈಜ್ ಮತ್ತು ಅಧಿಕಾರಿಗಳ ತಂಡ ಬಸ್ ನಿಲ್ದಾಣದಲ್ಲಿ ಅವ್ಯವಸ್ಥೆ ಪರಿಶೀಲಿಸಿ ಘಟಕ ವ್ಯವಸ್ಥಾಪಕರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸದಿರುವುದು, ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ಬಸ್ಗಳಿಗೆ ನಾಮಫಲಕ ಅಳವಡಿಸದೇ ಇರುವುದು, ಬಸ್ ನಿಲ್ದಾಣದಲ್ಲಿ ಅಳವಡಿಸಿದ ಟೈಲ್ಸ್ ದುರಸ್ತಿ ಕಾಣದೆ ಪ್ರಯಾಣಿಕರು ತೊಂದರೆ ಅನುಭವಿಸಬೇಕಾದ ದುಸ್ಥಿತಿ ಎದುರಾಗಿದೆ.
ಕೆಲ ಗ್ರಾಮೀಣ ಪ್ರದೇಶಗಳಿಗೆ ಕೊರೊನಾ ನೆಪದಲ್ಲಿ ಬಸ್ಗಳ ಕೊರತೆ, ಬಸ್ ನಿಲ್ದಾಣದಲ್ಲಿ ಆಸನಗಳ ಕೊರತೆ ಹಾಗೂ ವಿಕಲಚೇತನರ ಓಡಾಟಕ್ಕೆ ಅಗತ್ಯ ವ್ಯವಸ್ಥೆ ಮಾಡದಿರುದನ್ನು ಕಂಡು ಕಿಡಿಕಾರಿದ್ದಾರೆ. ಬಸ್ ಪಾಸ್ ನೀಡುವಾಗ ಹೆಚ್ಚಿಗೆ ಹಣ ಪಡೆದಿರುವ ಆರೋಪ ಕೇಳಿ ಬಂದ ಹಿನ್ನೆಲೆ ಈ ರೀತಿ ಆದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.