ಚಿಕ್ಕಬಳ್ಳಾಪುರ: ಜನರು ಕಟ್ಟಿದ ತೆರಿಗೆ ಹಣದಲ್ಲಿ ಚಿಕ್ಕಬಳ್ಳಾಪುರ ಉತ್ಸವಕ್ಕೆ ಎರಡು ಕೋಟಿ ಹಣ ಬಿಡುಗಡೆ ಮಾಡಿ ಜನರಿಗೆ ಮಂಕುಬೂದಿ ಎರಚುವ ಕೆಲಸವನ್ನು ಆರೋಗ್ಯ ಸಚಿವ ಮಾಡುತ್ತಿದ್ದಾರೆ ಎಂದು ಚಿಕ್ಕಬಳ್ಳಾಪುರ ಜೆಡಿಎಸ್ ಮುಖಂಡರು ಇಂದು ನಡೆದ ಸುದ್ದಿಗೋಷ್ಠಿ ನಡೆಸಿ ಗಂಭೀರ ಆರೋಪ ಮಾಡಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಇಂದು ಜೆಡಿಎಸ್ ಮುಖಂಡರು ಸುದ್ದಿಗೋಷ್ಠಿ ವೇಳೆ ಈ ಆರೋಪ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಉತ್ಸವಕ್ಕೆ 2 ಕೋಟಿ ಹಣ ವ್ಯರ್ಥವಾಗಿ ಖರ್ಚು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಆರೋಗ್ಯ ಮೇಳದ ವಿರುದ್ಧ ಅಸಮಾಧಾನ: ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಿರುವ ಆರೋಗ್ಯ ಮೇಳವೇ ನಕಲಿ ಎಂದು ಜಿಪಂ ಮಾಜಿ ಸದಸ್ಯ ಕೆ.ಸಿ.ರಾಜಾಕಾಂತ್ ಸೇರಿದಂತೆ ಇತರ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಸಿಎಂ ಕುಮಾರಸ್ವಾಮಿ ಅವರ ಪಂಚರತ್ನ ರಥ ಯಾತ್ರೆ ಬಳಿಕ ಸುಧಾಕರ್ಗೆ ಭಯ ಶುರುವಾಗಿದೆ. ಹೀಗಾಗಿಯೇ ಅವರು ಜಿಲ್ಲೆಯಲ್ಲಿ ಸಂಕ್ರಾಂತಿ ಉತ್ಸವ ಮಾಡಲು ಮುಂದಾಗಿದ್ದಾರೆ. ಈಗ ಉತ್ಸವದ ಉದ್ದೇಶವಾದರೂ ಏನಿದೆ? ಎಂದು ಪ್ರಶ್ನಿಸಿದರು.
ಸಂಕ್ರಾಂತಿ ಹಬ್ಬ ಎನ್ನುವುದು ಗೋವುಗಳ ಹಬ್ಬವಾಗಿದೆ. ರಾಜ್ಯದಲ್ಲೆಡೆ ಈಗ ಜಾನವಾರುಗಳಿಗೆ ಚರ್ಮ ಗಂಟು ರೋಗ ಬಂದಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದು ತುರ್ತು ಅಗತ್ಯವಾಗಿದೆ ಎಂದು ಜೆಡಿಎಸ್ ಮುಖಂಡ ಮುನೇಗೌಡ ಹೇಳಿದ್ದಾರೆ.
ಜಿಲ್ಲೆಯಲ್ಲಿ ಸಚಿವ ಸುಧಾಕರ್ ಸರ್ಕಾರಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಸುಗ್ಗಿಯ ಉತ್ಸವ ಬದಲು ರಾಜಕೀಯ ಉತ್ಸವ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಇದನ್ನೂ ಓದಿ: ಸರ್ಕಾರವು ರಂಗ ಎಂಬುದನ್ನು ತೆಗೆದು ಮಂಗ ಎಂಬಂತೆ ಮಾಡಿದೆ: ಮೀಸಲಾತಿ ಘೋಷಣೆ ವಿರುದ್ಧ ಹೆಚ್ಡಿಕೆ ಕಿಡಿ