ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ಪರ ಮಾಜಿ ಸಚಿವ ಜಮೀರ್ ಅಹಮದ್ ಅವರು ಸಚಿವ ಡಾ. ಕೆ. ಸುಧಾಕರ್ ಭದ್ರಕೋಟೆ ಚಿಕ್ಕಬಳ್ಳಾಪುರ ನಗರದಲ್ಲಿ ಕಾಂಗ್ರೆಸ್ ಪರ ಮತಯಾಚನೆ ಮಾಡಿದರು. ಅಲ್ಪಸಖ್ಯಾಂತರು ಹೆಚ್ಚಾಗಿ ವಾಸಿಸುವ ಶಾಂತಿನಗರ 17ನೇ ವಾರ್ಡ್ ಹಾಗೂ 3ನೇ ವಾರ್ಡ್ ದರ್ಗಾ ಮೊಹಲ್ಲಾದಲ್ಲಿ ಶನಿವಾರ ಪ್ರಚಾರ ನಡೆಸಿದರು.
ವಿಧಾನಸಭಾ ಚುನಾವಣೆ ಹತ್ತಿರವಾಗುತಿದ್ದಂತೆ ಯಾವ ವ್ಯಕ್ತಿಗಳ ಮಾತು ಜನರಿಗೆ ಹಿತವೋ, ನಂಬಿಕೆಯೋ ಅಂತವರನ್ನ ಕರೆಸಿ ಮಾತನಾಡಿಸಿ ಮತಸೆಳೆಯುವ ತಂತ್ರಗಾರಿಕೆಯನ್ನ ಎಲ್ಲಾ ರಾಜಕೀಯ ಪಕ್ಷಗಳು ಮಾಡುತ್ತವೆ. ಅದರಂತೆ ಚಿಕ್ಕಬಳ್ಳಾಪುರ ನಗರದಲ್ಲಿ ಮುಸ್ಲಿಂ ಜನರು ಹೆಚ್ಚು ವಾಸಿಸುವ ವಾರ್ಡುಗಳಲ್ಲಿ ಮಾಜಿ ಸಚಿವ ಜಮೀರ್ ಅಹಮದ್ ಅವರನ್ನ ಕರೆಸಿ ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ಪರ ಪ್ರಚಾರ ಮಾಡಿಸಿದರು. ಪ್ರಚಾರದಲ್ಲಿ ಭಾಷಣ ಮಾಡಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ಬಗ್ಗೆ ಜನರಿಗೆ ತಿಳಿಸಿದರು.
ನಂತರ ಜಮೀರ್ ಅಹಮದ್ ಅವರು ಜೆಡಿಎಸ್ಗೆ ಬೆಂಬಲ ನೀಡಿ ಕುಮಾರಸ್ವಾಮಿಯನ್ನ ಸಿಎಂ ಮಾಡಿದಾಗ ಏನಾಯ್ತು ಎನ್ನುವ ವಿವರಗಳನ್ನ ನೀಡಿದರು, ಪ್ರದೀಪ್ ಈಶ್ವರ್ ಒಳ್ಳೆ ಹುಡುಗ ಆತನಿಗೆ ಮತ ಹಾಕಿ ಎಂದು ಜನರಲ್ಲಿ ಮನವಿ ಮಾಡಿಕೊಂಡರು. ಡಾ ಕೆ ಸುಧಾಕರ್ ಅಕ್ರಮವಾಗಿ ಹಣವನ್ನು ದೋಚಿದ್ದಾರೆ, ಆತನಿಗೆ ಮತಹಾಕಬೇಡಿ ಎಂದು ಹೇಳಿದರು. ಸಿದ್ದರಾಮಯ್ಯ ರೀತಿ ಡ್ಯಾನ್ಸ್ ಮಾಡಿ ವ್ಯಂಗ್ಯವಾಡಿದ್ದ ಡಾ. ಕೆ ಸುಧಾಕರ್ ವಿರುದ್ಧ ಇದೇ ವೇಳೆ ಜಮೀರ್ ಅಹಮದ್ ವಾಗ್ದಾಳಿ ನಡೆಸಿದ್ದು 'ಸಿದ್ದರಾಮಯ್ಯ ಬಗ್ಗೆ ವ್ಯಂಗ್ಯ ಮಾಡಿದ್ರಲ್ಲ, ಧಮ್ ಇದ್ರೆ, ನನ್ನ ವಿರುದ್ಧ ಮಾತಾಡಲಿ ಆಗ ಮನೆಗೆ ನುಗ್ಗಿಲ್ಲ ಆಂದ್ರೆ ನನ್ನ ಹೆಸರು ಜಮೀರ್ ಅಲ್ಲಾ' ಎಂದು ಚಿಕ್ಕಬಳ್ಳಾಪುರ ನಗರದ ನಕ್ಕಲಕುಂಟೆ ಬಡಾವಣೆಯಲ್ಲಿ ಮತಯಾಚನೆ ವೇಳೆ ಗುಡುಗಿದರು.
ಇನ್ನು ಜಮೀರ್ ಅಹಮದ್ ಅವರನ್ನು ನೋಡಲು ನೂರಾರು ಜನ ಪ್ರಚಾರಕ್ಕೆ ಕಾರ್ಯಕ್ರಮಕ್ಕೆ ಆಗಮಿಸಿದ್ದು ಚಪ್ಪಾಳೆ, ಸಿಳ್ಳೆ ಹೊಡೆದು ಹುರಿದುಂಬಿಸಿದ್ದಾರೆ. ಅಜಾನ್ ಕೂಗುವ ಸಮಯದಲ್ಲಿ ಭಾಷಣ ನಿಲ್ಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಒಟ್ಟಾರೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸಚಿವ ಕೆ ಸುಧಾಕರ್ ಅವರನ್ನು ಸೋಲಿಸಲು ಒಂದು ಕಡೆ ಕಾಂಗ್ರೆಸ್, ಜೆಡಿಎಸ್ ತಮ್ಮದೇ ಆದ ಶೈಲಿಯಲ್ಲಿ ಮತಬೇಟೆ ನಡೆಸುತ್ತಿದ್ದಾರೆ. ಮತದಾರ ಪ್ರಭುಗಳು ಯಾರಿಗೆ ಮಣೆ ಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಮೋದಿ ಮೋಡಿ : ರೋಡ್ ಶೋ ವೇಳೆ ನಮೋಗೆ ಹೂವಿನ ಸುರಿಮಳೆ