ಚಿಕ್ಕಬಳ್ಳಾಪುರ: ಕೆಸಿ ವ್ಯಾಲಿ ನೀರು ಬಂದ ಹಲವು ತಿಂಗಳ ನಂತರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕುರಟಹಳ್ಳಿ ಕೆರೆಗೆ ನೀರು ಹರಿಸಲಾಗಿದೆ. ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಎಂ.ಕೃಷ್ಣಾರೆಡ್ಡಿ, ನೀರು ಹರಿಸುವಲ್ಲಿ ಬೇಜವಾಬ್ದಾರಿ ತೋರಿದ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ.
ಕೆಸಿ ವ್ಯಾಲಿ ನೀರು ಹರಿಸುವ ಯೋಜನೆಯಲ್ಲಿ 126 ಕೆರೆಗಳು ಸೇರುತ್ತದೆ. ಅದರಲ್ಲಿ ಚಿಂತಾಮಣಿ ತಾಲೂಕಿಗೆ 5 ಕೆರೆಗಳು ಬರುತ್ತದೆ. ಕುರುಟಹಳ್ಳಿ ಕೆರೆಯಲ್ಲಿ 2 ದಿನಗಳ ಹಿಂದೆ ಕೆರೆಗೆ ನೀರು ಬಿಟ್ಟಿದ್ದುನ್ನು ಇಂದು ವೀಕ್ಷಣೆ ಮಾಡಲು ಬಂದಿದ್ದ ಶಾಸಕ ಕೃಷ್ಣಾರೆಡ್ಡಿ, ಕೆರೆಯನ್ನು ಸ್ವಚ್ಛತೆ ಮಾಡದೆ ತರಾತುರಿಯಲ್ಲಿ ಕೆರೆಗೆ ನೀರು ಬಿಟ್ಟಿರುವುದು ಸರಿಯಲ್ಲ. ಮೊದಲು ಅಧಿಕಾರಿಗಳು ಕೆರೆಯನ್ನು ಪರಿಶೀಲಿಸಿ ನಂತರ ನೀರು ಬಿಡಬೇಕಾಗಿತ್ತು. ಇದು ಯಾರ ಒತ್ತಡದಿಂದ ಈ ರೀತಿ ಮಾಡಿದ್ದಾರೆ ಗೊತ್ತಾಗಿಲ್ಲ. ಯಾವುದೇ ಸೌಜನ್ಯ ಇಲ್ಲದೆ ಜನರ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಸರ್ಕಾರ ನೀಡಿದ 1,500 ಕೋಟಿ ರೂ. ನೀರುಪಾಲು ಮಾಡಿದ್ದೀರಾ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.