ಚಿಕ್ಕಬಳ್ಳಾಪುರ: ಮಾಚಹಳ್ಳಿ ಕೆರೆಯಲ್ಲಿ ದೊಡ್ಡ ಗುಂಡಿಗಳನ್ನು ತೆಗೆದು, ಅಕ್ರಮವಾಗಿ ಮಣ್ಣು ಸಾಗಣೆ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.
ಗುಡಿಬಂಡೆ ತಾಲೂಕಿನ ಕಸಬಾ ಹೋಬಳಿಯ ಉಲ್ಲೋಡು ಪಂಚಾಯತ್ಗೆ ಸೇರಿರುವ ಮಾಚಹಳ್ಳಿ ಕೆರೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಸೇರುತ್ತದೆ. ಈ ಕೆರೆಯಲ್ಲಿ ಜೆಸಿಬಿ ಮೂಲಕ ಗುಂಡಿಗಳನ್ನು ತೋಡಿ ಪ್ರತಿದಿನ ನೂರಾರು ಟಿಪ್ಪರ್ ಮಣ್ಣನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ. ಆದರೂ ಕೂಡ ಅಧಿಕಾರಿಗಳು ಇತ್ತ ತಿರುಗಿಯೂ ನೋಡದೇ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕೆರೆಯಲ್ಲಿ ಸಂಗ್ರಹವಾಗಿರುವ ಮಣ್ಣನ್ನು ರೈತರು ಕೃಷಿ ಉದ್ದೇಶಕ್ಕಾಗಿ ತಮ್ಮ ಜಮೀನುಗಳಿಗೆ ಬಳಸಿಕೊಳ್ಳಬಹುದು. ಇಟ್ಟಿಗೆ ಕಾರ್ಖಾನೆ ಹಾಗೂ ಇತರೆ ವಾಣಿಜ್ಯ ಉದ್ದೇಶಕ್ಕೆ ಕೆರೆಯ ಮಣ್ಣನ್ನು ತೆಗೆಯಬೇಕಾದರೆ ಸಂಬಂಧಪಟ್ಟ ಇಲಾಖೆಗೆ ರಾಜಧನವನ್ನು ಪಾವತಿಸಿ, ಪರವಾನಿಗೆ ಪಡೆಯುವುದು ಖಡ್ಡಾಯವಾಗಿರುತ್ತೆ. ಆದ್ರೆ ಇಲ್ಲಿಂದ ಮಣ್ಣು ಸಾಗಿಸುವವವರು ಯಾವುದೇ ಪರವಾನಿಗೆ ಪಡೆದಿಲ್ಲ ಎಂದು ಹೇಳಲಾಗ್ತಿದೆ.