ಚಿಕ್ಕಬಳ್ಳಾಪುರ: ಕಳೆದ 20 ದಿನಗಳಿಂದ ಸುರಿದ ಭಾರಿ ಮಳೆಗೆ ಜಿಲ್ಲಾದ್ಯಂತ ಕೆರೆ, ಕುಂಟೆ ನದಿಗಳು ತುಂಬಿ ತುಳುಕುತ್ತಿವೆ. ಹಲವಾರು ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಪ್ರವಾಹ ಭೀತಿ ಶುರುವಾಗಿದೆ. ಪರಿಣಾಮ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜಿಲ್ಲೆಯ ಹಲವು ಗ್ರಾಮಗಳಲ್ಲಿ ನೀರಿನ ಹರಿವು ಹೆಚ್ಚಾಗಿ ಚರಂಡಿಯ ನೀರು ಸಹಾ ಮನೆಗೆ ನುಗ್ಗುತ್ತಿದೆ. ಈಗಾಗಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಜೊತೆಗೆ ಪ್ರವಾಹದ ಭೀತಿಯಲ್ಲಿರುವ ಗ್ರಾಮಸ್ಥರ ನೆರವಿಗೆ 08156-277071 ಹಾಗೂ 277077 ಸಂಖ್ಯೆಯ ಸಹಾಯವಾಣಿಯನ್ನು ಪ್ರಾರಂಭಿಸಿದೆ. ಆದರೆ, ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಅಧಿಕ ಮಳೆಯಿಂದ ಜಿಲ್ಲೆಯಲ್ಲಿ ಫಸಲಿಗೆ ಬಂದಿದ್ದ ಸಾವಿರಾರು ಹೆಕ್ಟೇರ್ಗಳ ಜೋಳ, ಭತ್ತ, ರಾಗಿ ಅವರೆ ಬೆಳೆಗಳು ಕೊಚ್ಚಿಕೊಂಡು ಹೋಗಿವೆ. ಇದು ರೈತರಿಗೆ ದಿಕ್ಕು ತೋಚದಂತಾಗಿದೆ. ಈಗಾಗಲೇ ಜಿಲ್ಲೆಯ ಅಧಿಕಾರಿಗಳು ಸಮೀಕ್ಷೆ ನಡೆಸಿದ್ದು, ಯಾವ ರೀತಿ ಪರಿಹಾರ ಒದಗಿಸುತ್ತಾರೆ ಎಂಬುದನ್ನು ಜನ ಕಾದು ನೋಡುತ್ತಿದ್ದಾರೆ.
ಪಾಪಗ್ನಿ, ಪಿನಾಕಿನಿ ನದಿ, ಶ್ರೀನಿವಾಸ, ಸಾಗರ ಮೈತುಂಬಿ ಹರಿಯುತ್ತಿವೆ. ಇವು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಕಂದವಾರ ಕೆರೆ, ರಂಗಧಾಮ, ಲಕ್ಷ್ಮಿಸಾಗರ, ಅಗ್ರಹಾರ, ಜಕ್ಕಲಮಡುಗು ಜಲಾಶಯ, ಕನ್ನಂಪಲ್ಲಿ ಕೆರೆಗಳು ಸೇರಿದಂತೆ ಸಾಕಷ್ಟು ಕೆರೆಗಳು ಭರ್ತಿಯಾಗಿ ಕೊಡಿ ಹರಿಯುತ್ತಿವೆ. ಹೀಗಾಗಿ, ಜನ ಕಂಗಾಲಾಗಿದ್ದಾರೆ.
ಓದಿ: ಏಕಕಾಲಕ್ಕೆ ಅರಬ್ಬಿ, ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ಮಳೆ