ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ಕ್ಷೇತ್ರಗಳಲ್ಲಿ ಹಣದ ರಾಜಕೀಯ ನಡೆಯುತ್ತಿದೆ. ಇಂದಿನ ಸರ್ಕಾರವು ಜನರ ಹಣವನ್ನು ದೋಚಿ ಚುನಾವಣೆಯ ಸಮಯದಲ್ಲಿ ಉಡುಗೊರೆಗಳನ್ನು ನೀಡಿ ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಸಾದಲಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯ ಮೂಲಕ ಬಿಜೆಪಿಯವರು ಹೈದರಾಬಾದ್ ಕರ್ನಾಟಕ ಭಾಗಕ್ಕೆ ಕಲ್ಯಾಣ ಕರ್ನಾಟಕ ಅಂತ ಹೆಸರಿಟ್ಟಿದ್ದಾರೆ. ಆದರೆ, ಸಮಾಜ ಕಲ್ಯಾಣ ಇಲಾಖೆಯೇ ಹಾಸ್ಟೆಲ್ಗಳನ್ನು ಬಾಡಿಗೆ ಕಟ್ಟದೇ ಕಳೆದ ಮೂರು ತಿಂಗಳಿಂದ ನಡೆಸುತ್ತಿದೆ.
ಅಲ್ಲಿ ನೆಲೆಸಿದ್ದ ಹೆಣ್ಣು ಮಕ್ಕಳನ್ನು ಏಕಾಏಕಿ ಹಾಸ್ಟೆಲ್‌ನಿಂದ ಹೊರ ಹಾಕಿದ್ದಾರೆ. ಅಲ್ಲದೇ ಕೆಲವರನ್ನು ಕೂಡಿ ಹಾಕಿದ್ದಾರೆ ಎಂದು ವರದಿಯಾಗಿರುವುದು ನಾಚಿಗೇಡಿನ ಸಂಗತಿ ಎಂದು ಕಿಡಿ ಕಾರಿದರು.
ಬೆಳಗಾವಿಯಲ್ಲಿ ಹೈಸ್ಕೂಲ್ ಮಕ್ಕಳಿಗಾಗಿ ಕನ್ನಡ ಶಾಲೆ ತೆರೆದಿಲ್ಲ. ಹೀಗಾಗಿ ಮಕ್ಕಳು ಮರಾಠಿ ಶಾಲೆಗೆ ಹೋಗುವಂತಹ ಪರಿಸ್ಥಿತಿ ಬಂದಿದೆ. ಅಲ್ಲಿನ ಮಕ್ಕಳು ಸರ್ಕಾರಿ ಶಾಲೆ ಬೇಕು ಅಂತಿದ್ದಾರೆ. ಆದರೆ, ಕನ್ನಡ ಶಾಲೆಯಲ್ಲಿ ಶಿಕ್ಷಕರ ನೇಮಕಾತಿ ಈವರೆಗೂ ಮಾಡಿಲ್ಲ.ಇದಕ್ಕಾಗಿ ಪಂಚರತ್ನ ಯೋಜನೆ ಅಡಿ ಯಾವ ರೀತಿಯಾಗಿ ಸರ್ಕಾರಿ ಶಾಲೆ ತೆರೆಯಬೇಕು ಎಂಬುದನ್ನು ನಿರ್ಣಯಿಸಿದ್ದೇನೆ. ಅಲ್ಲದೇ ಮಕ್ಕಳ ಪೋಷಕರು ಸಾಲ ಮಾಡಬಾರದು ಅನ್ನುವ ಚಿಂತನೆಯನ್ನು ಇಟ್ಟುಕೊಂಡಿದ್ದೇನೆ ಎಂದು ತಿಳಿಸಿದರು.
ಮರಾಠಿ ಮಾತನಾಡುವ ಪ್ರದೇಶ ಸೇರಿಸಿಕೊಳ್ಳಲು ಮಹಾರಾಷ್ಟ್ರ ಬಿಜೆಪಿ ಸರ್ಕಾರ ಕೋರ್ಟ್ ಮೊರೆ ಹೋಗಿದ್ದಾರೆ. ಇದರಲ್ಲಿ ನೀವು(ಕರ್ನಾಟಕ ಬಿಜೆಪಿ ಸರ್ಕಾರ) ಭಾಗಿಯಾಗಿದ್ದೀರೆಂದು ಅನಿಸುತ್ತಿದೆ. ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕ ಭಾಗದಲ್ಲಿ ಶಾಲೆಯನ್ನು ತೆರೆಯಲು ನೀವೆಷ್ಟು ಮಹತ್ವ ನೀಡಿದ್ದೀರಾ? ಇದರಲ್ಲಿ ನಿಮ್ಮ ವೈಫಲ್ಯ ಎದ್ದು ಕಾಣುತ್ತಿದೆ ಎಂದರು.
ಡಬಲ್ ಇಂಜಿನ್ ಸರ್ಕಾರ ಕರ್ನಾಟಕಕ್ಕೆ ಅತ್ಯಂತ ಆಘಾತ ತರುವ ರೀತಿ ನಡೆದುಕೊಳ್ಳುತ್ತಿದೆ .ನಾಡಿನ ಸಮಸ್ಯೆಗಳಿಗೆ ಪರಿಹಾರ ಕೊಡುವ ಯಾವುದೇ ನಿರ್ಧಾರವನ್ನು ಮಾಡಿಲ್ಲ. ಹೀಗಿರುವಾಗ ಡಬಲ್ ಇಂಜಿನ್ ಸರ್ಕಾರ ಇದ್ದು ಏನು ಪ್ರಯೋಜನ. ನಮ್ಮದು ದೆಹಲಿ ಮೂಲದ ಪಕ್ಷ ಅಲ್ಲ, ಕರ್ನಾಟಕದಿಂದ ಮಾಡುವ ಅಧಿಕಾರದ ಪಕ್ಷವಾಗಿದೆ ಎಂದು ಬಿಜೆಪಿಯನ್ನು ಟೀಕಿಸಿದರು.
ಶಿಡ್ಲಘಟ್ಟದ ಬೆಟ್ಟ ಗುಡ್ಡ ಕರಗಿಸುವ ಕೆಲಸ ಆಗುತ್ತಿದೆ. ಇದರಲ್ಲಿ ಉಸ್ತುವಾರಿ ಸಚಿವರು ಕೂಡ ಭಾಗಿಯಾಗಿದ್ದಾರೆ. ಇನ್ನೂ ಚಿಕ್ಕಬಳ್ಳಾಪುರ, ಬಾಗೇಪಲ್ಲಿ ಬಿಜೆಪಿ ಹಣದಿಂದ ಗೆಲ್ಲುತ್ತಿರುವ ಕ್ಷೇತ್ರವಾಗಿದ್ದು, ಹಬ್ಬ ಹರಿದಿನ ಬಂದಾಗ ಉಡುಗೊರೆ ಕೊಟ್ಟು ಸೆಳೆಯುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: ಮುಖ್ಯಮಂತ್ರಿ ಗದ್ದುಗೆ ಮೇಲೆ ಕುಮಾರಸ್ವಾಮಿ ಕಣ್ಣು: ಜೆಡಿಎಸ್ ಅಧಿಕಾರಕ್ಕೆ ತರಲು ಜಾಣ ನಡೆ?