ಚಿಕ್ಕಬಳ್ಳಾಪುರ: ದಕ್ಷಿಣ ಮತ್ತು ಉತ್ತರ ಪಿನಾಕಿನಿ ನದಿ ಚಿಕ್ಕಬಳ್ಳಾಪುರ ಜಿಲ್ಲೆಯ ಉಗಮ ಸ್ಥಾನವಾಗಿದ್ದು ನಮಗೆ ನೀರು ಕೊಡದೇ, ನೆರೆಯ ರಾಜ್ಯಕ್ಕೆ ಕೊಟ್ಟು ರಾಷ್ಟ್ರೀಯ ಪಕ್ಷ ದ್ರೋಹ ಮಾಡುತ್ತಿವೆ. ಗುಲಾಮಗಿರಿಗೆ ನಾಡನ್ನ ಬಲಿಕೊಟ್ರೆ ಸುಮ್ಮನೆ ಬಿಡಲ್ಲ ಎಂದು ರಾಷ್ಟ್ರೀಯ ಪಕ್ಷಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಎಚ್ಚರಿಕೆ ಕೊಟ್ಟಿದ್ದಾರೆ.
ಬೆಳಗಾವಿಯ ಬಗ್ಗೆ ಮಹಾರಾಷ್ಟ್ರದ ವಿಚಾರವಾಗಿ ಶಿವಸೇನೆಯಿಂದ ಒಡೆದು ಬಂದ ಗುಂಪು ಬಿಜೆಪಿ ಜೊತೆ ಸೇರಿದ್ದಾರೆ. ಮಹಾರಾಷ್ಟ್ರಕ್ಕೆ ನಿಪ್ಪಾಣಿ ಸೇರಬೇಕು ಅಂತ ಡಿಮ್ಯಾಂಡ್ ಮಾಡಿದ್ದಾರೆ. ಕೋಲಾರ ಚಿಕ್ಕಬಳ್ಳಾಪುರ ಭಾಗದಲ್ಲಿ ತೆಲುಗು ಮಾತನಾಡುವ ಜನ ಇದ್ದಾರೆ. ಚಾಮರಾಜನಗರ ಕಡೆ, ಹೊಸೂರು ಕಡೆ ಹೋದರೆ ತಮಿಳುನಾಡು ಗ್ರಾಮ ಇದೆ. ಮಂಗಳೂರಿನ ಕಡೆ ಕೇರಳ ಗಡಿ ಇದೆ. ಇಲ್ಲೆಲ್ಲೂ ಗಡಿ ಸಮಸ್ಯೆ, ಅಶಾಂತಿ ಸೃಷ್ಟಿಸೋ ಚಿತ್ರಣ ಇಲ್ಲ. ಆದರೆ ಮಹಾರಾಷ್ಟ್ರ ಕಡೆ ನೋಡಿದಾಗ ಇಲ್ಲಿ ಕಣ್ಣು ಯಾಕೆ ಹಾಕಿದ್ದಾರೆ ಎಂದು ಪ್ರಶ್ನಿಸಿದರು.
ಮಹಾರಾಷ್ಟ್ರ ಭಾಗದ ಕಡೆ ಸಕ್ಕರೆ ಕಾರ್ಖಾನೆ, ನಿಪ್ಪಾಣಿಯಲ್ಲಿ ಬೇರೆ ಬೇರೆ ಅಭಿವೃದ್ಧಿ ಆಗಿದ್ದು, ಮುಂದಿನ ದಿನಗಳಲ್ಲಿ ವಾಣಿಜ್ಯ ಕೇಂದ್ರ ಆಗಲಿದೆ ಇದರ ಬಗ್ಗೆ ನಮ್ಮ ರಾಜ್ಯ ಸರ್ಕಾರ ತೆಗೆದುಕೊಂಡ ಕ್ರಮ ಏನಿದೆ.? ಎಲ್ಲೋ ಅವರ ಕುಮ್ಮಕು ಇದೆ ಅಂತ ನಾನು ಬಾವಿಸ್ತೇನೆ. ಇನ್ನು ಬಿಜೆಪಿ ಸರ್ಕಾರ ಬಂದಾಗಲೇ ಈ ಸಮಸ್ಯೆ ಬರ್ತಿದೆ. ಡಬಲ್ ಇಂಜಿನ್ ಸರ್ಕಾರವೇ ಇದಕ್ಕೆ ಕಾರಣವಾಗಿದೆ ಬೊಮ್ಮಾಯಿ ಹೆಬ್ಬೆಟ್ಟಿನ ಸಿಎಂ ಆಗಿದ್ದು ಇಲ್ಲಿಂದ ದೆಹಲಿಗೆ ತೆರಳಿ ಕೈ ಕಟ್ಟಿಕೊಂಡು ಬಂದಿದ್ದಾರೆ. ನೀರಿನ ವಿಚಾರವಾಗಿ ಏನು ಕ್ರಮ ಕೈಗೊಂಡಿದ್ದಾರೆ ಎಂಬುವುದು ಗೊತ್ತಿದೆ ಎಂದು ತಿಳಿಸಿದರು.
ಸರ್ಕಾರ ಇರುವುದು ಜನರ ಹಿತಕಾಯಲು: ಬಿಜೆಪಿ ಪಕ್ಷ ಜನಸಂಕಲ್ಪ ಅಂತ ರ್ಯಾಲಿ ಹೊರಟಿದ್ದಾರೆ. ಆದರೆ, ಎಲ್ಲಾ ಲೂಟಿ ಹೊಡೆದಾಗಿದೆ. ಈಗ ಜನರ ಬಳಿ 150 ಸೀಟು ಅಂತ ಹೇಳಿಕೊಂಡು ಹೋಗ್ತಿದ್ದಾರೆ. ಎರಡು ಹೊತ್ತಿನ ಊಟಕ್ಕೆ ಧರ್ಮದ ರಾಜಕಾರಣ ಮಾಡಿಕೊಂಡು ಹೋಗ್ತಿದ್ದಾರೆ. ಸರ್ಕಾರ ಇರೋದು ಎಲ್ಲರ ಹಿತ ಕಾಯಲು, ಧರ್ಮ ಒಡೆಯಲು ಅಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಓಟರ್ ಐಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಐಎಎಸ್ ಅಧಿಕಾರಿಗಳ ಸಸ್ಪೆಂಡ್ ಮಾಡಿದ್ದಾರೆ. ಆದರೆ, ಅಧಿಕಾರಿಗಳ ಬಲಿ ಮಾಡೋದಲ್ಲ. ಇದರಲ್ಲಿ ಯಾವ ರಾಜಕಾರಣಿ ಇದ್ದಾರೆ ಅವರನ್ನ ಸಂಪುಟದಿಂದ ಹೊರಗೆ ಹಾಕಿ. ದುಡ್ಡಲ್ಲಿ ಮತ ಗಳಿಸ್ತೀವಿ ಅಂತ ತಿಳಿದಿದ್ರೆ. ಭ್ರಮೆಯಿಂದ ಹೊರಗೆ ಬನ್ನಿ. ಜನರೇ ನಿಮ್ಮನ್ನ ಹೊರಗೆ ಕಳಿಸ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೆಹಲಿ ನಾಯಕರ ಮುಂದೆ ಮಾತನಾಡಲು ಶಕ್ತಿ ಇಲ್ಲ: ಬೊಮ್ಮಾಯಿ ಹೆಬ್ಬೆಟ್ಟಿನ ಮುಖ್ಯಮಂತ್ರಿಯಾಗಿದ್ದಾರೆ. ಹೊರನೋಟಕ್ಕೆ ಕನ್ನಡಿಗರಿಗೆ ಮುಂದೆ ಹೇಳೋದೇ ಬೇರೆ, ಅಂತಿಮವಾಗಿ ದೆಹಲಿ ನಾಯಕರ ಮುಂದೆ ಕೈಕಟ್ಟಿ ನಿಲ್ಲುತ್ತಾರೆ. ಕೇಂದ್ರ ಸರ್ಕಾರ ಉತ್ತರ ಪಿನಾಕಿನಿ, ದಕ್ಷಿಣ ಪಿನಾಕಿನಿ ನದಿ ಜೋಡಣೆ ತೀರ್ಮಾನ ಮಾಡಿದೆ. ಎರಡೂ ನದಿಗಳ ಉಗಮಸ್ಥಾನ ಕರ್ನಾಟಕದಲ್ಲೆ ಇದೆ.
ಆದರೆ, ಇದರಿಂದ ಏನು ಉಪಯೋಗವಿಲ್ಲ. ಈಗ ಮತ್ತೊಂದು ನ್ಯಾಯಾಧಿಕರಣ ಸ್ಥಾಪನೆ ಮಾಡಲು ಮುಂದಾಗಿದೆ. ನಿಮ್ಮ ಒಳ ಆಂತರಿಕ ವ್ಯವಹಾರದ ಮೂಲಕ ಜನರಿಗೆ ದಿಕ್ಕು ತಪ್ಪಿಸುವ ಕೆಲಸ ಬೇಡ. 25 ಸಂಸದರು ಅಮಿತ್ ಶಾ ಮೋದಿ ಮುಂದೆ ಮಾತನಾಡುವ ಶಕ್ತಿ ಇಲ್ಲ ಎಂದು ಬೀಚಗಾನಹಳ್ಳಿಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ: ನಮ್ಮ ಮನವಿಯನ್ನು ಚುನಾವಣಾ ಆಯೋಗ ಅಂಗೀಕರಿಸಿ ಇಬ್ಬರ ವಿರುದ್ಧ ಕ್ರಮ ಕೈಗೊಂಡಿದೆ: ಡಿಕೆಶಿ