ಚಿಕ್ಕಬಳ್ಳಾಪುರ: ಹಿಂದೂ ಧರ್ಮದ ಮಹಾಪುರುಷ ಶ್ರೀ ರಾಮನ ಜನ್ಮಸ್ಥಳ ಆಗಿರುವ ಅಯೋಧ್ಯೆಯೂ ಭಾರತದ ಪುಣ್ಯ ಭೂಮಿಯೂ ಹೌದು. ಶ್ರೀರಾಮನ ಅಯೋದ್ಯೆಗೆ ಪ್ರಿಯ ಶಿಷ್ಯ ಹನುಮಂತನ ಜನ್ಮಭೂಮಿ ಕರ್ನಾಟಕದಿಂದ ಗ್ರಾನೈಟ್ ಕಲ್ಲುಗಳು ರವಾನೆಯಾಗುತ್ತಿರುವುದು.
ಹೌದು .. ಅಯೋಧ್ಯಾ ಮಂದಿರ ನಿರ್ಮಾಣವು ಕೋಟ್ಯಂತರ ಹಿಂದೂಗಳ ಕನಸಾಗಿದೆ. ಆದರೆ ಅಯೋಧ್ಯಾ ಹೆಸರು ಕೇಳಿದರೆ ಹಿಂದೂಗಳಲ್ಲಿ ಒಂಥರಾ ರೋಮಾಂಚನ ಭಾವ ಹುಟ್ಟುವಾಗ, ಅಯೋಧ್ಯೆಯ ರಾಮಮಂದಿರ ನಿರ್ಮಿಸಲು ನಮ್ಮ ರಾಜ್ಯದ ಪಂಚಗಿರಿ ಖ್ಯಾತಿಯ ಜಿಲ್ಲೆಯಿಂದ ಗ್ರಾನೈಟ್ ದಿಂಡು ರವಾನೆಯಾಗುತ್ತಿರುವುದು ಕೋಟ್ಯಂತರ ಕನ್ನಡಿಗರಿಗೆ ಹಮ್ಮೆ ತಂದಿದೆ. ರಾಜ್ಯದ ಸಿಲಿಕಾನ್ ಸಿಟಿಗೆ ಕೂಗಳತೆಯ ದೂರದ ಚಿಕ್ಕಬಳ್ಳಾಪುರ ಜಿಲ್ಲೆಯು ರಾಮಮಂದಿರ ನಿರ್ಮಾಣದಲ್ಲೂ ಕೈಜೋಡಿಸಿದೆ.
ಗ್ರಾನೈಟ್ ಕಲ್ಲುಗಳ ವಿಶೇಷತೆ.. ಇದೇ ಶ್ರೀರಾಮ ಮಂದಿರ ನಿರ್ಮಾಣ ಕಾಮಗಾರಿಗೆ ನಮ್ಮ ರಾಜ್ಯದ ಚಿಕ್ಕಬಳ್ಳಾಪುರ ತಾಲೂಕು ಗುವ್ವಲಕಾನಹಳ್ಳಿ ಗ್ರಾಮದ ಬಳಿ ಇರುವ ಕಲ್ಲುಕ್ವಾರಿಯಿಂದ ಗ್ರಾನೈಟ್ ದಿಂಡು ರವಾನಿಸಲಾಗುತ್ತಿದೆ. ಚಿಕ್ಕಬಳ್ಳಾಪುರ ಹಾಗೂ ದೇವನಹಳ್ಳಿ ಮೂಲದ 4 ಗ್ರಾನೈಟ್ ಕಂಪನಿಗಳಿಗೆ ದಿಂಡುಗಳನ್ನು ಸಾಗಿಸಲು ಉಪಗುತ್ತಿಗೆ ನೀಡಿದ್ದು, ಈಗಾಗಲೇ 12 ಸಾವಿರಕ್ಕೂ ಅಧಿಕ ದಿಂಡುಗಳನ್ನು 3 ಅಡಿ ದಪ್ಪ, 5 ಅಡಿ ಉದ್ದ, 2 ಅಡಿ ಅಗಲದ ದಿಂಡುಗಳನ್ನು ಅಚ್ಚುಕಟ್ಟಾಗಿ ಕಟ್ಟಿಂಗ್, ಪಾಲಿಶ್ ಮಾಡಿ ಎಕ್ಸ್ಪೋರ್ಟ್ ಮಾಡಿ ರವಾನಿಸುತ್ತಿದ್ದಾರೆ.
17 ಸಾವಿರ ಗ್ರಾನೈಟ್ ದಿಂಡು: ಚಿಕ್ಕಬಳ್ಳಾಪುರದಿಂದ ರವಾನೆಗೆ 17 ಸಾವಿರ ಗ್ರಾನೈಟ್ ದಿಂಡುಗಳಿಗೆ ಒಪ್ಪಿಗೆ ನೀಡಲಾಗಿದೆ. ತಾಲೂಕಿನ ಗುವ್ವಲಕಾನಹಳ್ಳಿ ಬಳಿ ಗ್ರೇ ಗ್ರಾನೈಟ್ ಬೆಟ್ಟವೇ ಇದೆ. ಅದು ಶ್ರೀರಾಮನ ಹೆಸರಿನಲ್ಲಿ ಕರಗುತ್ತಿದೆ. ಈ ಬೆಟ್ಟದಲ್ಲಿ 16 ಅಲಂಕಾರಿಕ ಶಿಲೆ ಗಣಿಗಾರಿಕೆಗಳಿಗೆ ಅವಕಾಶ ನೀಡಲಾಗಿದೆ.
ಐಐಟಿ ಸಂಸ್ಥೆಗಳಿಂದ ಪರಿವೀಕ್ಷಣೆ, ಒಪ್ಪಿಗೆ: ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ರಾಕ್ ಮೆಕಾನಿಕ್ಸ್, ಐಐಟಿ ದೆಹಲಿ, ಕೋಲ್ಕತ್ತಾ, ಮದ್ರಾಸ್ ಸಂಸ್ಥೆಗಳು ಈ ಕಲ್ಲುಗಳನ್ನು ಪರಿವೀಕ್ಷಣೆ ನಡೆಸಿದ್ದು, ಸರ್ಕಾರಕ್ಕೆ ವರದಿ ನೀಡಿವೆ. ಅಯೋಧ್ಯಾ ಮಂದಿರಕ್ಕೆ ಚಿಕ್ಕಬಳ್ಳಾಪುರ ಗ್ರಾನೈಟ್ ಕಲ್ಲುಗಳು ಸೂಕ್ತ, ಇವು ನೀರು ಹಾಗೂ ಬೆಂಕಿ ನಿರೋಧಕ ಸಾಮರ್ಥ್ಯ ಸೇರಿದಂತೆ ಭೂಕಂಪನ ಪ್ರತಿರೋಧ ಸಾಮರ್ಥ್ಯ ಇರುವುದು ಪರಿಶೋಧನೆಯಲ್ಲಿ ಸ್ಪಷ್ಟವಾಗಿದೆ ಎಂದು ಐಐಟಿ ತಿಳಿಸಿದೆ.
ಗುವ್ವಲಕಾನಹಳ್ಳಿ ಬಂಡೆ ವಿಶಿಷ್ಟ.. ದೇಶದಲ್ಲಿರುವ ಕಲ್ಲು ಗಣಿಗಾರಿಕೆಗಳಲ್ಲೇ ಗುವ್ವಲಕಾನಹಳ್ಳಿ ಬಂಡೆ ವಿಶಿಷ್ಟ ಸಾಂದ್ರತೆ ಹೊಂದಿದೆಯಂತೆ. ಇದರಿಂದ ಅಯೋಧ್ಯಾ ಕಾಮಗಾರಿ ನಿರ್ವಹಿಸುತ್ತಿರುವ ಎಲ್ & ಟಿ ಗುತ್ತಿಗೆ ಸಂಸ್ಥೆ ಚಿಕ್ಕಬಳ್ಳಾಪುರದ ಗುವ್ವಲಕಾನಹಳ್ಳಿ ಬಂಡೆಯಲ್ಲಿ ಸಿಗುವ ಗ್ರಾನೈಟ್ ದಿಂಡುಗಳನ್ನೇ ಸರಬರಾಜು ಮಾಡುವಂತೆ ಸೂಚಿಸಿದೆ. ಇದರಿಂದ ಚಿಕ್ಕಬಳ್ಳಾಪುರ ದೇವನಹಳ್ಳಿ ತಾಲೂಕಿನ ಸಾದಹಳ್ಳಿ ಹಾಗೂ ಸುತ್ತಮುತ್ತಲಿನಲ್ಲಿರುವ ಗ್ರಾನೈಟ್ ಕಂಪನಿಗಳಲ್ಲಿ ಕಟ್ಟಿಂಗ್, ಪಾಲಿಶ್ ಮಾಡಿ ಅಯೋಧ್ಯೆಗೆ ರವಾನಿಸುತ್ತಿರುವುದು ಗ್ರಾಮಸ್ಥರಿಗೆ ಸಂತಸ ಮೂಡಿಸಿದೆ.
ಇದನ್ನೂಓದಿ: ತುಳುನಾಡ ದೈವ ಕೊರಗಜ್ಜನಿಗೆ ಉಕ್ರೇನ್ ಕುಟುಂಬದಿಂದ ಅಗೇಲು ಸೇವೆ.. ದೈವ ಶಕ್ತಿಗೆ ನಮನ