ಗುಡಿಬಂಡೆ: ಸುಮಾರು 12 ಎಕರೆ ಸರ್ಕಾರಿ ಗೋಮಾಳ ಜಮೀನನ್ನು ಒತ್ತುವರಿ ಮಾಡಲಾಗಿದೆ ಎಂದು ಉಲ್ಲೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಆರೋಪಿಸಿದ್ದಾರೆ.
ಸುಮಾರು 8 ಹಳ್ಳಿಗಳ ದನ ಕರುಗಳ ಮೇವಿಗಾಗಿ ಮೀಸಲಿರುವ ಸರ್ಕಾರಿ ಹುಲ್ಲು, ಬನ್ನಿ ಮತ್ತು ಗೋಮಾಳ, ಗುಂಡುತೋಪು ಜಮೀನಿನ ಒತ್ತುವರಿಯಾಗಿದೆ. ಕೆಲವರು ರಾತ್ರೋರಾತ್ರಿ ಅರಣ್ಯ ಇಲಾಖೆಯಿಂದ ನೆಟ್ಟಿದ್ದ ಗಿಡ ಮರಗಳನ್ನು ಕಡಿದು ಟ್ರ್ಯಾಕ್ಟರ್ ಮೂಲಕ ಸಾಗಿಸಿದ್ದಾರೆ. ಉಲ್ಲೋಡು ಸರ್ವೇ ನಂ 35, 36 ಮತ್ತು 55 ಹಾಗೂ ಅಕ್ಕ ಪಕ್ಕದ ಸರ್ವೇ ನಂಬರ್ಗಳಲ್ಲಿ ಇರುವ ಸುಮಾರು 30-50 ಎಕರೆ ಸರ್ಕಾರಿ ಜಮೀನನ್ನು ಈ ಮೂಲಕ ಒತ್ತುವರಿ ಮಾಡಿದ್ದಾರೆ ಎಂದು ರೈತ ಉಲ್ಲೋಡು ಶ್ರೀನಿವಾಸರೆಡ್ಡಿ ಮತ್ತು ಶಿವರಾಜ್ ಕುಮಾರ್ ಆರೋಪಿಸಿದರು.
ಸುತ್ತಮುತ್ತಲಿನ ಹಳ್ಳಿಯ ಜಾನುವಾರುಗಳಿಗೆ ಆಶ್ರಯವಾಗಿರುವ ಗೋಮಾಳದಲ್ಲಿ ರಾತ್ರಿ ಟ್ರಾಕ್ಟರ್ ತಂದು ಇಲ್ಲಿಯೇ ಮದ್ಯಪಾನ ಮಾಡಿ ಗಿಡಗಳನ್ನು ನಾಶ ಮಾಡಿದ್ದಾರೆ. ಈ ರೀತಿಯ ಅಕ್ರಮ ಒತ್ತುವರಿಯಿಂದ ರೈತರಿಗೆ ತೊಂದರೆಯಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಲವು ಹಳ್ಳಿಗಳ ಕುರಿ ಮತ್ತು ಮೇಕೆ ಸಾಕಾಣಿಕೆದಾರ ರೈತರಿಗೆ ಇರುವ ಜಾಗ ಉಲ್ಲೋಡು ಹುಲಿಬೆಟ್ಟ (ಪಿಲ್ಲಗುಟ್ಟ), ಬೋಡಗುಟ್ಟ, ಗಂಗಮ್ಮ ಬೆಟ್ಟದಲ್ಲಿ ಮೀಸಲಿರುವ ಅರಣ್ಯ ಮತ್ತು ಕಂದಾಯ ಇಲಾಖೆಯ ಜಮೀನುಗಳನ್ನ ಕೆಲವರು ಕಬಳಿಸುತ್ತಿದ್ದಾರೆ. ಇದರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ದನ ಕರುಗಳ ಸಮೇತ ಕಚೇರಿಗಳಿಗೆ ಮುತ್ತಿಗೆ ಹಾಕುತ್ತೇವೆಂದು ಎಚ್ಚರಿಸಿದರು.
ಈ ಕುರಿತು ತಹಶೀಲ್ದಾರ್ ಸಿಬ್ಗತ್‍ವುಲ್ಲಾ ಮಾತನಾಡಿ, ಈ ಕುರಿತು ತನಿಖೆ ನಡೆಸಲಾಗುತ್ತದೆ. ತಪ್ಪು ಕಂಡು ಬಂದರೆ ಕ್ರಮ ಕೈಗೊಳ್ಳುತ್ತೇನೆ.ಸರ್ಕಾರಿ ಜಾಗಕ್ಕೆ ಹದ್ದುಬಸ್ತು ಮಾಡುತ್ತೇನೆ ಎಂದು ತಿಳಿಸಿದರು.