ಚಿಕ್ಕಬಳ್ಳಾಪುರ: ಆಶಾ ಕಾರ್ಯಕರ್ತರಿಗೆ ಹಾಗೂ ಹಳ್ಳಿ ಜನರಿಗೆ ಒಂದು ಮಾಸ್ಕ್ ಕೊಡುವ ಯೋಗ್ಯತೆ ಇಲ್ಲದ ಚಿಂತಾಮಣಿ ತಾಲೂಕು ಪಂಚಾಯಿತಿಗೆ ನಾಚಿಕೆಯಾಗಬೇಕೆಂದು ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್. ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಂತಾಮಣಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ವೈರಸ್ನಿಂದ ಇಡೀ ದೇಶ ನಲುಗುತ್ತಿದೆ. ಆದರೆ, ತಾಲೂಕು ಪಂಚಾಯಿತಿಯಿಂದ ಆಶಾ ಕಾರ್ಯಕರ್ತರಿಗೆ ಹಾಗೂ ಹಳ್ಳಿ ಜನರಿಗೆ ಮಾಸ್ಕ್ ಸೇರಿದಂತೆ ಯಾವುದೇ ಅಗತ್ಯ ಪರಿಕರಗಳನ್ನು ನೀಡಿಲ್ಲ. ಸಾಮಾನ್ಯ ಸಭೆಯಲ್ಲಿ ಮೊದಲು ಕೋವಿಡ್-19 ವಿಚಾರದ ಬಗ್ಗೆ ಚರ್ಚೆ ನಡೆಸಿ ನಂತರ ಸಾಮಾನ್ಯ ಸಭೆಯನ್ನು ಮುಂದುವರಿಸಿ ಎಂದು ಅವರು ಅಧ್ಯಕ್ಷರು ಮತ್ತು ಕೆಲ ಸದಸ್ಯರ ಮೇಲೆ ಹರಿಹಾಯ್ದರು.
ತಾಲೂಕು ಪಂಚಾಯಿತಿ ಮುರುಗಮಲ್ಲ ಕ್ಷೇತ್ರದ ಸದಸ್ಯ ನರಸಿಂಹ ರಾಜು.ಕೆ ಮಾತನಾಡಿ, ನಮಗೆ ತಾಲೂಕು ಪಂಚಾಯಿತಿಯಿಂದ ಯಾವುದೇ ಅನುದಾನ ಬರುತ್ತಿಲ್ಲ. ಮೊದಲು ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿ ಇಲ್ಲದಿದ್ದರೆ ನಾವು ಸಾಮಾನ್ಯ ಸಭೆಯನ್ನು ಬಹಿಷ್ಕಾರ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.