ಚಿಕ್ಕಬಳ್ಳಾಪುರ: ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮಹಿಳೆ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಿನ್ನೆ (ಬುಧವಾರ) ನಡೆದಿದೆ. ಅಡುಗೆ ಅನಿಲ ಸೋರಿಕೆಯಾಗಿರುವ ಬಗ್ಗೆ ಪಕ್ಕದ ಮನೆಯವರಿಗೆ ತಿಳಿಸಲು ಮಹಿಳೆ ಬಂದಿದ್ದರು. ಈ ಸಮಯದಲ್ಲೇ ಸಿಲಿಂಡರ್ ಸ್ಪೋಟಗೊಂಡಿದೆ.
ಮನೆ ಸಮೀಪದ ಹೇಮಾವತಿ ಸೇರಿದಂತೆ ಮೂವರಿಗೆ ಗಾಯಗಳಾಗಿವೆ. ಚಿಕ್ಕಬಳ್ಳಾಪುರ ನಗರದ 5ನೇ ವಾರ್ಡ್ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎದುರಿನ ಕೊಳೆಗೇರಿ ಪ್ರದೇಶದ ಶೀಟ್ ಮನೆಯೊಂದರಲ್ಲಿ ಘಟನೆ ನಡೆದಿದ್ದು, ಸ್ಫೋಟದ ರಭಸಕ್ಕೆ ಗೃಹ ಬಳಕೆ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮನೆ ಗೊಡೆಗಳಿಗೆ ಹಾನಿಯಾಗಿದೆ. ಶೀಟುಗಳು ಹಾರಿ ಬಿದ್ದಿವೆ. ಅಕ್ಕಪಕ್ಕದ ಮನೆಗಳು ವಾಹನಗಳು ಜಖಂಗೊಂಡಿವೆ.
ತೀವ್ರವಾಗಿ ಗಾಯಗೊಂಡ ಹೇಮಾವತಿ, ಮನೆಯಲ್ಲಿದ್ದ ಬಾಲಕ ಸಾದಿಕ್, ಬಾಲಕಿ ಹರ್ಷಿಯಾ ಅವರನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಮನೆ ಯಜಮಾನಿ ಪರ್ಜಾನಾ ಎಂಬವರು ಕೆಲಸಕ್ಕೆಂದು ಅರ್ಧಗಂಟೆ ಮೊದಲು ಮನೆ ತೊರೆದಿದ್ದರು. ವಾರ್ಡ್ ಸದಸ್ಯ ನಾಗರಾಜ್ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ನಗರ ಪೊಲೀಸ್ ಠಾಣಾ ಪಿಎಸ್ಐ ನಂಜುಂಡಯ್ಯ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.
ಇದನ್ನೂ ಓದಿ: ಮನೆಯಲ್ಲಿ ಆಕಸ್ಮಿಕ ಸ್ಫೋಟ .. ಮಕ್ಕಳು ಸೇರಿದಂತೆ ಆರು ಮಂದಿಗೆ ಗಾಯ
ಪ್ರತ್ಯೇಕ ಪ್ರಕರಣ-ಬನ್ನೇರುಘಟ್ಟದ ಮನೆಯಲ್ಲಿ ಸಿಲಿಂಡರ್ ಸ್ಫೋಟ: ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮನೆ ಛಾವಣಿ ಹಾಗೂ ಕಿಟಕಿ ಛಿದ್ರಗೊಂಡ ಘಟನೆ ಇತ್ತೀಚೆಗೆ ಬೆಂಗಳೂರಿನ ಬನ್ನೇರುಘಟ್ಟದ ಸುದರ್ಶನ ನಗರದಲ್ಲಿ ನಡೆದಿತ್ತು. ಮನೆಯಲ್ಲಿದ್ದ ತಂದೆ ಹಾಗೂ ಮಗಳಿಗೆ ಗಾಯಗಳಾಗಿತ್ತು. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಬನ್ನೇರುಘಟ್ಟದ ಸುದರ್ಶನ ನಗರದಲ್ಲಿನ ಶಿವಕುಮಾರ್ ಎಂಬವರ ಬಾಡಿಗೆ ಮನೆಯಲ್ಲಿ ಘಟನೆ ಜರುಗಿತ್ತು.
ಮನೆ ಬಾಡಿಗೆಗೆ ಕೊಟ್ಟಿದ್ದ ಶಿವಶಂಕರ್ ಅವರು ಪಕ್ಕದ ಮೇಲಿನ ಅಂತಸ್ತಿನ ಮನೆಯಲ್ಲಿ ವಾಸವಿದ್ದರು. ಸ್ಫೋಟದ ಪರಿಣಾಮ ಮನೆ ಕಿಟಕಿ, ಸಿಮೆಂಟ್ ಶೀಟ್ ಮೇಲ್ಛಾವಣಿ ಛಿದ್ರವಾಗಿತ್ತು. ಕಾರು ಹಾಗೂ ಬೈಕ್ ಸ್ಫೋಟದ ತೀವ್ರತೆಗೆ ಸಿಲುಕಿ ನೆಲಕ್ಕುರುಳಿವೆ. ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.
ಇದನ್ನೂ ಓದಿ: Cylinder blast: ಬೆಂಗಳೂರಿನಲ್ಲಿ ಸಿಲಿಂಡರ್ ಸ್ಫೋಟ.. ಓರ್ವ ಸಾವು, ಇಬ್ಬರಿಗೆ ಗಾಯ