ಚಿಕ್ಕಬಳ್ಳಾಪುರ: ಇಲ್ಲೊಬ್ಬ ಆಧುನಿಕ ಪರುಶುರಾಮ ಮುಪ್ಪಿನಲ್ಲೂ ತನ್ನ ಸ್ವಂತ ದುಡಿಮೆಯಿಂದಲೇ ಜೀವನ ಸಾಗಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಹೆಸರು ಕೃಷ್ಣಾಮಾಚಾರಿ. ವಯಸ್ಸು 90. ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲೂಕಿನಲ್ಲಿ ವಾಸ. ಪೂರ್ವಜರು ತೊಡಗಿದ್ದ ವೃತ್ತಿಯನ್ನು 12 ವಯಸ್ಸಿನಲ್ಲೇ ಆರಂಭಿಸಿದ ಅವರು, 78 ವರ್ಷಗಳ ಕಾಲ ಅದನ್ನೇ ತನ್ನ ವೃತ್ತಿಯಾಗಿಸಿಕೊಂಡಿದ್ದಾರೆ.
ಕುಡುಗೋಲು, ಕೊಡಲಿ, ಕುರಪಿ, ಗುದ್ದಲಿ, ಹಾರೆ, ಪಿಕಾಸಿ ಹೀಗೆ ರೈತರ ಕೃಷಿಗೆ ಅಗತ್ಯವಿರುವ ಸಲಕರಣೆಗಳನ್ನು ಮಾಡಿಕೊಡುವುದರಲ್ಲಿ ನಿಸ್ಸೀಮರಾಗಿರುವ ಅವರು, ಉಸಿರಿರುವರೆಗೂ ಕೆಲಸ ಮಾಡುತ್ತೇನೆ ಎನ್ನುವ ಮೂಲಕ ಕೆಲಸ ಮಾಡುವ ಛಲ ತೋರಿಸಿದ್ದಾರೆ.
ಪ್ರತಿನಿತ್ಯ ಸಿಗುವ ನೂರಿನ್ನೂರು ರೂಪಾಯಿಗಳ ಆದಾಯದಲ್ಲೇ ಜೀವನ ಸಾಗಿಸುತ್ತಿದ್ದೇನೆ. ಬರುವ ಆದಾಯದಿಂದ ಜೀವನದ ಬಂಡಿ ಸಾಗಿಸುವುದು ಕಷ್ಟ. ಸದ್ಯ ಮಳೆ ಇಲ್ಲದ ಕಾರಣ ಕೆಲಸ ಕಡಿಮೆಯಾಗಿದೆ ಎಂದು ಕೃಷ್ಣಮಾಚಾರಿ ಬೇಸರ ವ್ಯಕ್ತಪಡಿಸಿದರು.
ಕೃಷ್ಣಾಮಾಚಾರಿಗೆ ಐವರು ಮಕ್ಕಳು. ಮೂವರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸಿದ್ದಾರೆ. ಉಳಿದ ಇಬ್ಬರು ಗಂಡು ಮಕ್ಕಳಲ್ಲಿ ಒಬ್ಬರು ಸ್ವಗ್ರಾಮದಲ್ಲೇ ಕುಲುಮೆ ಕೆಲಸವನ್ನು ಮಾಡಿಕೊಳ್ಳುತ್ತಿದ್ದರೆ, ಇನ್ನೊಬ್ಬರು ಸರ್ಕಾರಿ ಅಧಿಕಾರಿಯಾಗಿ ನಿವೃತ್ತಿ ಹೊಂದಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ 50 ವರ್ಷಕ್ಕೇ ನಾನಾ ರೋಗಗಳು ಮಾನವನ ದೇಹಕ್ಕೆ ವಕ್ಕರಿಸುತ್ತವೆ. ಇತ್ತ ಕೃಷ್ಣಾಮಾಚಾರಿಗೆ 90 ವರ್ಷ ದಾಟಿದರೂ ತಾನು ನಂಬಿದ ವೃತ್ತಿ ಬಿಡದೇ ನಿರುದ್ಯೋಗಿಗಳಿಗೆ ಮಾದರಿಯಾಗಿದ್ದಾರೆ.