ಚಿಕ್ಕಬಳ್ಳಾಪುರ : ಗೆಳೆತನ ಅದು ಕಡಲಿನಂತೆ.. ಬಲು ಆಳ. ರಕ್ತ ಸಂಬಂಧಕ್ಕೂ ಮೀರಿದ್ದು. ಎಲ್ಲೋ ಹುಟ್ಟಿ, ಇನ್ನೆಲ್ಲೋ ಬೆಳೆದು ಜೀವನ ಯಾನದಲ್ಲಿ ಜತೆಗೂಡುವ ಪ್ರಯಾಣಿಕರೇ ಸ್ನೇಹಿತರು. ಸ್ನೇಹಕ್ಕೆ ಒಂದೇ ದಿನವಿಲ್ಲ. ಅದು ಅನುದಿನ, ಅನುಕ್ಷಣವೂ ಇರುತ್ತೆ. ಆಗಸ್ಟ್ ಮೊದಲ ಭಾನುವಾರ ಫ್ರೆಂಡ್ಶಿಪ್ ಡೇ ಎಂದು ಆಚರಿಸಲಾಗುತ್ತೆ. ಮಹಾಭಾರತದಲ್ಲಿ ಕರ್ಣ, ದುರ್ಯೋಧನರ ಸ್ನೇಹ ಮರೆತವರುಂಟೆ. ಸ್ನೇಹ ಹಸಿರಾಗಿಸಲು ಈ ಗೆಳೆಯರೆಲ್ಲ ಒಂದ್ಕಡೆ ಸೇರಿದಾರೆ. ಬರೀ ಸೇರಿರೋದಲ್ಲ, ಇಲ್ಲಿರುವ ಕಲ್ಯಾಣಿಯನ್ನ ಶುಚಿಗೊಳಿಸ್ತಿದಾರೆ.
ಸ್ನೇಹಿತರ ದಿನ ಬ್ಯಾಂಡ್ ಕಟ್ಟಿ ಇಲ್ಲ ಪಾರ್ಟಿ, ಮೋಜು ಮಸ್ತಿ ಮಾಡೋರೆ ಹೆಚ್ಚು. ಆದರೆ, ಬೆಂಗಳೂರಿನ ಶೇಷಾದ್ರಿಪುರಂ ಸಂಜೆ ಕಾಲೇಜಿನ ಗೆಳೆಯರೆಲ್ಲ ಸಮಾಜಮುಖಿ ಕಾರ್ಯದ ಮೂಲಕ ತಮ್ಮ ಸ್ನೇಹಿತರ ದಿನ ಸಂಭ್ರಮಿಸಿದಾರೆ. ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ ಮತ್ತು ಕಾಲೇಜು ವಿದ್ಯಾರ್ಥಿಗಳು ಸ್ನೇಹಿತರ ದಿನಾಚರಣೆ ಪ್ರಯುಕ್ತ ಚಿಕ್ಕಬಳ್ಳಾಪುರ ತಾಲೂಕಿನ ಪುರಾತನ ರಂಗಸ್ಥಳದ ರಂಗನಾಥ ಸ್ವಾಮಿ ದೇವಾಲಯದ ಆವರಣ ಹಾಗೂ ಕಲ್ಯಾಣಿಯಲ್ಲಿ ಬೆಳೆದಿದ್ದ ಗಿಡ-ಗಂಟಿಗಳನ್ನು ಕಿತ್ತು ಸ್ವಚ್ಛಗೊಳಿಸಿದರು.
ಸ್ನೇಹಿತರ ದಿನವೇ ಒಂದೆಡೆ ಸೇರಿದ್ದಾಯ್ತು. ಹಾಗೇ ಇಡೀ ದೇವಸ್ಥಾನದ ಆವರಣ ಶುಚಿಗೊಳಿಸಲಾಯ್ತು. ಈಗ ದೇವಸ್ಥಾನದ ಕಲ್ಯಾಣಿ ಸೇರಿ ಆವರಣವೆಲ್ಲ ಮತ್ತಷ್ಟು ಸುಂದರವಾಗಿ ಕಾಣ್ತಿದೆ. ಇದರಿಂದಾಗಿ ಇವರ ಗೆಳೆತನವೂ ಹಸಿರಾಗುವಂತಾಗಿದೆ. ಇವರ ಈ ನಡೆ ಗೆಳೆತನಕ್ಕೆ ಸ್ಫೂರ್ತಿ ನೀಡುವಂತಿದೆ.