ಚಿಕ್ಕಬಳ್ಳಾಪುರ : ಒಂದೇ ಗ್ರಾಮದ ಐವತ್ತಕ್ಕೂ ಹೆಚ್ಚು ಮಂದಿ ವಾಂತಿ ಹಾಗೂ ಬೇಧಿಯಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಜಿಲ್ಲೆಯ ರೆಡ್ಡಿಗೊಲ್ಲವಾರಹಳ್ಳಿಯಲ್ಲಿ ನಡೆದಿದೆ.
ಭಾನುವಾರ ರೆಡ್ಡಿಗೊಲ್ಲವಾರಹಳ್ಳಿ ಪಕ್ಕದ ಬಯಪ್ಪನಹಳ್ಳಿ ಗ್ರಾಮದ ಗುರುಪ್ರಸಾದ್ ಎಂಬುವರ ಮನೆಯಲ್ಲಿ ನಾಮಕರಣ ಮಹೋತ್ಸವ ಇತ್ತು. ಕಾರ್ಯಕ್ರಮ ಮುಗಿದ ನಂತರ ಸಂಜೆ ಉಳಿದಿದ್ದ ಊಟವನ್ನು ರೆಡ್ಡಿಗೊಲ್ಲವಾರಹಳ್ಳಿಯ ಹಲವರು ಊಟವನ್ನು ಮನೆಗೆ ತೆಗೆದುಕೊಂಡು ಹೋಗಿ ಸೇವಿಸಿದ್ದರು ಎನ್ನಲಾಗಿದೆ.
ಆದರೆ, ಇಂದು ತಡರಾತ್ರಿ ಊಟ ಮಾಡಿದ ಹಲವರಿಗೆ ವಾಂತಿ-ಬೇಧಿ, ಆಯಾಸದಿಂದ ಕುಸಿದು ಬಿದ್ದಿದ್ದಾರೆ. ನಂತರ ಗ್ರಾಮಕ್ಕೆ ಭೇಟಿ ನೀಡಿದ ಆಶಾ ಕಾರ್ಯಕರ್ತೆ ಮಂಜುಳ 108 ಆ್ಯಂಬುಲೆನ್ಸ್ಗಳಿಗೆ ಕರೆ ಮಾಡಿ ಅಸ್ವಸ್ಥರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ.
ನಾಮಕರಣದಲ್ಲಿ ಬೆಳಗ್ಗೆ ಊಟ ಮಾಡಿದವರಿಗೆ ಯಾವುದೇ ತೊಂದರೆಯಾಗಿಲ್ಲ. ಆದ್ರೆ, ಸಂಜೆಯ ನಂತರ ಮನೆಗೆ ತಗೆದುಕೊಂಡು ಹೋದವರಲ್ಲಿ ಆರೋಗ್ಯ ಕೆಟ್ಟಿದೆ ಎಂದು ತಿಳಿದು ಬಂದಿದೆ.