ಬಾಗೇಪಲ್ಲಿ: ಆಂಧ್ರಪ್ರದೇಶದ ಗಡಿ ತಾಲೂಕು ಬಯಲು ಸೀಮೆ ಪ್ರದೇಶ. ಇಲ್ಲಿ ಹೆಚ್ಚಿನ ರೈತರು ವರ್ಷಕ್ಕೊಮ್ಮೆ ಟೊಮೆಟೊ ಬೆಳೆದು ತಮ್ಮ ಜೀವನ ಕಟ್ಟಿಕೊಳ್ಳುತ್ತಾರೆ. ಹೀಗಿರುವಾಗ ಕೊರೊನಾ ಮಹಾಮಾರಿಯಿಂದಾಗಿ ಬೆಳೆದ ಬೆಳೆಗೆ ಬೆಲೆಯಿಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಕೂಲಿ, ವಾಹನ ಬಾಡಿಗೆ, ದಲ್ಲಾಳಿಗಳ ಕಾಟ ಒಂದೆಡೆಯಾದ್ರೆ, ತರಕಾರಿ ತರಲು ಹೋಗಿ ಪೊಲೀಸರ ಬೆತ್ತದ ರುಚಿ ಸವಿಯುವ ಜನಸಾಮಾನ್ಯರು ಮತ್ತೊಂದೆಡೆ. ಈ ಸಂದಿಗ್ಧ ಪರಿಸ್ಥಿತಿಯನ್ನೇ ಅಸ್ತ್ರವನ್ನಾಗಿಸಿದ ಕೆಲವರು ದುಪ್ಪಟ್ಟು ದರದಲ್ಲಿ ಮನೆ-ಮನೆಗೆ ತರಕಾರಿ ಮಾರಾಟ ಮಾಡುತ್ತಿದ್ದಾರೆ. ತಾಲೂಕಿನಲ್ಲಿ ಸಾವಿರಾರು ರೈತರು ಬೆಳೆದಿದ್ದ ತರಕಾರಿ ಮತ್ತು ಹಣ್ಣುಗಳು ಕಟಾವಿಗೆ ಬಂದಿವೆ.
ಈ ಉತ್ಪನ್ನಗಳನ್ನು ಮಾರಾಟ ಮಾಡಲು ಲಾಕ್ಡೌನ್ನಿಂದ ತೊಂದರೆಗೀಡಾಗಿದ್ದಾರೆ. ಹೀಗಾಗಿ ಕೃಷಿ ಉತ್ಪನ್ನಗಳಿಗೆ ವಿನಾಯಿತಿಯನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ನೀಡಿವೆ ಮತ್ತು ಕೃಷಿ ಉತ್ಪನ್ನಗಳು ಯಾವುದೇ ಕಾರಣಕ್ಕೂ ಹಾಳಾಗದಂತೆ ಮಾರಾಟ ಮಾಡಲು ಸಾಗಾಣಿಕೆ ಮಾಡಲು ತಮ್ಮ ಪರವಾನಿಗೆ ಅವಶ್ಯಕತೆ ಇದೆ. ತಾಲೂಕಿನ ರೈತರಿಗೆ ವಿಳಂಬವಿಲ್ಲದೆ ಪರವಾನಿಗೆ ನೀಡಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ತಾಲೂಕು ತಹಶೀಲ್ದಾರ್ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.