ಚಿಕ್ಕಬಳ್ಳಾಪುರ : ಜಿಲ್ಲೆಯ ಶಿಡ್ಲಘಟ್ಟದಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಭಾಷಣಕ್ಕೆ ರೈತ ಸಂಘದ ಕಾರ್ಯಕರ್ತರು ಅಡ್ಡಿಪಡಿಸಿದ ಹಿನ್ನೆಲೆ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾದ ಘಟನೆ ನಿನ್ನೆ ನಡೆಯಿತು.
ಶಿಡ್ಲಘಟ್ಟ ತಾಲೂಕಿನ ಹಿತ್ತಲಹಳ್ಳಿ ಬಳಿ ಕೆಎಸ್ಆರ್ಸಿ ಬಸ್ ಡಿಪೋ ಉದ್ಘಾಟನೆ ಕಾರ್ಯಕ್ರಮಕ್ಕೆ ಸಚಿವ ಶ್ರೀರಾಮಲು ಆಗಮಿಸಿ, ಭಾಷಣ ಆರಂಭಿಸುತ್ತಿದ್ದಂತೆ ರೈತ ಸಂಘದ ಕಾರ್ಯಕರ್ತರು ಗಲಾಟೆ ಮಾಡಿದರು.
ಸಚಿವರಿಗೆ ಮನವಿ ಪತ್ರ ನೀಡಲು ಬಂದಿದ್ದ ರೈತ ಸಂಘದವರನ್ನ ಪೊಲೀಸರು ತಡೆದ ಹಿನ್ನೆಲೆ ಶಿಡ್ಲಘಟ್ಟ ರೈತಸಂಘದ ಮುಖಂಡ ಪ್ರತೀಶ್ ಸೇರಿದಂತೆ ಹಲವರು ಗಲಾಟೆ ಮಾಡಿದರು. ಈ ಗೊಂದಲದಿಂದಾಗಿ ಸ್ವಲ್ಪ ಕಾಲ ಭಾಷಣ ನಿಲ್ಲಿಸಿದ ಸಚಿವ ಶ್ರೀರಾಮುಲು, ನಂತರ ರೈತ ಸಂಘಟನೆಗಳೊಂದಿಗೆ ಮಾತುಕತೆ ನಡೆಸಿ ಅವರನ್ನ ಸಮಾಧಾನ ಮಾಡಿದರು.
ನಂತರ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಶ್ರೀರಾಮುಲು, ದೇಶದಲ್ಲಿ ಕಾಂಗ್ರೆಸ್ ಕಥೆ ಖೇಲ್ ಖತಂ - ದುಖಾನ್ ಬಂದ್ ಆಗಿದೆ. ಪಂಚ ರಾಜ್ಯಗಳ ಫಲಿತಾಂಶದ ನಂತರ ಇಡೀ ದೇಶದಲ್ಲಿ ಕಾಂಗ್ರೆಸ್ ಧೂಳಿಪಟ ಆಗಿದೆ. ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿಯೂ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮತ್ತೆ ಬರುತ್ತೆ ಅಂತ ಕೈ ನಾಯಕರು ಕನಸು ಕಾಣುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ; Russia-Ukraine Conflict : ಯುದ್ಧದಲ್ಲೂ ಕಾರ್ಯನಿರ್ವಹಿಸುತ್ತಿವೆ ಉಕ್ರೇನ್ನ ಬ್ಯಾಂಕ್ಗಳು