ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕು ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳ ವೇಷದಲ್ಲಿ ಬಂದಿದ್ದ ಇಬ್ಬರಿಗೆ ತಹಶೀಲ್ದಾರ್ ಗಣಪತಿ ಶಾಸ್ತ್ರೀ ನಿಮ್ಮ ಐಡಿ ಕಾರ್ಡ್ ತೋರಿಸಿ ಎಂದಾಕ್ಷಣ ಆ ನಕಲಿ ಅಧಿಕಾರಿಗಳು ತಾಲೂಕು ಕಚೇರಿಯಿಂದ ಎಸ್ಕೇಪ್ ಆದ ಘಟನೆ ನಡೆದಿದೆ.
ಥೇಟ್ ಲೋಕಾಯುಕ್ತ ಅಧಿಕಾರಿಗಳಂತೆ ನೀಟಾಗಿ ಇನ್‍ಶರ್ಟ್ ಮಾಡಿಕೊಂಡು, ಕೈಯಲ್ಲಿ ಫೈಲು ಹಿಡಿದುಕೊಂಡು ಚಿಕ್ಕಬಳ್ಳಾಪುರ ತಾಲೂಕು ಕಚೇರಿಗೆ ಇಬ್ಬರು ನಕಲಿ ಅಧಿಕಾರಿಗಳು ಬಂದಿದ್ದರು. ತಹಶೀಲ್ದಾರ್ ಮುಂದೆಯೇ ಕುಳಿತು ಇವರಲ್ಲಿ ಒಬ್ಬಾತ ತನ್ನನ್ನು ಪ್ರಣವ್ ಎಂದು ಪರಿಚಯಿಸಿಕೊಂಡಿದ್ದಾನೆ. ತಾನು ಲೋಕಾಯುಕ್ತ ಅಧಿಕಾರಿಯಾಗಿದ್ದು, ಬೆಂಗಳೂರಿನಿಂದ ಬಂದಿದ್ದೇನೆ ಎಂದು ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವರಲ್ಲಿ ಹೇಳಿದ್ದಾರೆ .
ನಕಲಿ ಅಧಿಕಾರಿಗಳು ಮೊದಲು ತಾಲೂಕು ಕಚೇರಿ ಪಕ್ಕದ ಸಬ್‍ರಿಜಿಸ್ಟ್ರಾರ್ ಕಚೇರಿ ಕಡೆ ಹೋಗಿ, ಒಂದು ಗಂಟೆ ತಾಲೂಕು ಕಚೇರಿ ಸುತ್ತಲೂ ಅಲೆದಾಡಿ ಬಳಿಕ ಕಚೇರಿಯೊಳಗೆ ಬಂದಿದ್ದಾರೆ. ನೇರವಾಗಿ ಶಿರಸ್ತೇದಾರರ ಬಳಿ ತೆರಳಿ ಸೊಪ್ಪಹಳ್ಳಿ ಗ್ರಾಮದ ಸರ್ವೇ ನಂಬರ್ 103 ಸೇರಿ ಅವರಿಗೆ ಬೇಕಾದ ಎಲ್ಲ ದಾಖಲೆಗಳನ್ನು ಪಡೆದುಕೊಂಡಿದ್ದಾರೆ.
ಮತ್ತೆ ತಾಲೂಕು ಕಚೇರಿಯ ಎಲ್ಲ ಶಾಖೆಗಳಿಗೂ ಭೇಟಿ ನೀಡಿ ತನಗೆ ಬೇಕಾದ ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಅರ್ಜೆಂಟ್ ಅಂತ ಹೇಳಿ ಕೆಳಹಂತದ ಅಧಿಕಾರಿಗಳ ಬಳಿ ತನಗೆ ಬೇಕಾದ ಎಲ್ಲಾ ದಾಖಲೆಗಳನ್ನು ಪಡೆದು ಹೋಗುತ್ತಿದ್ದ ಅಸಾಮಿಯನ್ನು ಕಂಡ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಅವನನ್ನು ತಡೆದು ನಿಲ್ಲಿಸಿದ್ದಾರೆ. ಅವರ ಬಳಿ, ನೀವು ಯಾರು, ಎಲ್ಲಿ ನಿಮ್ಮ ಐಡಿ ಕಾರ್ಡ್ ತೋರಿಸಿ ಎಂದಿದ್ದಾರೆ.
ಇದನ್ನೂ ಓದಿ: ಕೈ ಕಲಿಗಳಿಂದ ಬೆಂಗಳೂರಿನಲ್ಲಿ ಪೇಸಿಎಂ ಪೋಸ್ಟರ್ ಅಭಿಯಾನ: ನಾಯಕರನ್ನು ವಶಕ್ಕೆ ಪಡೆದ ಪೊಲೀಸ್
ಅದಕ್ಕೆ ಅವರು ಐಡಿ ಕಾರ್ಡ್ ತಂದಿಲ್ಲ ಅಂದಿದ್ದಾನೆ. ಹಾಗಾದರೆ ನಿಮ್ಮ ಕಚೇರಿಯ ಎಸ್ಪಿ ಅವರಿಗೆ ಕರೆ ಮಾಡಿಕೊಡಿ, ನಾನು ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಅದಕ್ಕೆ ಪ್ರಣವ್ ಕರೆ ಮಾಡುವವನಂತೆ ನಾಟಕ ಮಾಡಿದ್ದಾರೆ. ಈ ವೇಳೆ ಹೊರಗಡೆ ಐಡಿ ಕಾರ್ಡ್ ಇದೆ ತರುತ್ತೇನೆ ಎಂದು ಹೇಳಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.