ಚಿಕ್ಕಬಳ್ಳಾಪುರ: ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಗೆ ಸರ್ಕಾರಿ ಜಮೀನು ಮಂಜೂರು ಪತ್ರ ನೀಡುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಜಿಲ್ಲೆಯ ಚಿಂತಾಮಣಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿತ್ತು.
ತಾಲೂಕಿನ ಕೈವಾರ ಹೋಬಳಿ ಮಡಬಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಉಮಾದೇವಿ ಸರ್ಕಾರಿ ಗೋಮಾಳ ಸರ್ವೆ 01ರಲ್ಲಿ 2ಎಕರೆ ಜಮೀನಿನಲ್ಲಿ 30 ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದಿದ್ದಾರೆ. ರಾಗಿ ಮತ್ತಿತರ ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತಿದ್ದಾರೆ. 1998 ರಲ್ಲಿ ಜಮೀನು ಮಂಜೂರಾತಿಗೆ 53 ಅರ್ಜಿಗಳು ಸಲ್ಲಿಸಿದ್ದು, ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡಾ ಅಧಿಕಾರಿಗಳು ಗ್ರಾಮದ ಕೆಲ ಜನರೊಂದಿಗೆ ಶಾಮೀಲಾಗಿ ದಲಿತ ಕುಟುಂಬಕ್ಕೆ ಮಂಜೂರಾತಿ ಪತ್ರ ನೀಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದರು.
ಅಷ್ಟೇ ಅಲ್ಲದೇ ದಲಿತ ಕುಟುಂಬದ ಮೇಲೆ ದೌರ್ಜನ್ಯ ದಬ್ಬಾಳಿಕೆ ಮಾಡುವುದಲ್ಲದೇ, ಗ್ರಾಮದ ಕೆಲ ವ್ಯಕ್ತಿಗಳು ತಹಶಿಲ್ದಾರ್ ಅವರಿಗೆ ಸುಳ್ಳು ಮಾಹಿತಿ ನೀಡಿ ಮಂಜೂರಾತಿ ಪತ್ರ ನೀಡದಂತೆ ತಕರಾರು ಅರ್ಜಿ ಹಾಕಿದ್ದಾರೆ ಎಂದು ದೂರಿದರು. ದಲಿತರ ಮೇಲೆ ದೌರ್ಜನ್ಯ ಎಸಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ರವಾನಿಸಿದರು.