ಚಿಕ್ಕಬಳ್ಳಾಪುರ: ನೈಋತ್ಯ ರೈಲ್ವೆ ವಲಯದ ಹಾಗೂ ಕರ್ನಾಟಕದ ಮೊಟ್ಟ ಮೊದಲ ಕಿಸಾನ್ ರೈಲು ಸೇವೆಗೆ ರಾಜ್ಯದಲ್ಲಿ ಚಾಲನೆ ದೊರೆತಿದೆ. ಜೂನ್ 19 ರಂದು ಚಿಂತಾಮಣಿ ತಾಲೂಕಿನ ದೊಡ್ಡನತ್ತ ರೈಲ್ವೆ ನಿಲ್ದಾಣದಿಂದ ಕೋಲಾರ ಸಂಸದ ಎಸ್.ಮುನಿಸ್ವಾಮಿ ಹಾಗೂ ಶಾಸಕ ಎಂ.ಕೃಷ್ಣಾರೆಡ್ಡಿ ಹಸಿರು ನಿಶಾನೆ ತೋರಿದರು.
ಬಳಿಕ ಮಾತನಾಡಿದ ಎಸ್.ಮುನಿಸ್ವಾಮಿ, ನೈಋತ್ಯ ರೈಲ್ವೆ ವಲಯದ ಹಾಗೂ ಕರ್ನಾಟಕ ರಾಜ್ಯದ ಮೊಟ್ಟ ಮೊದಲ ಈ ಕಿಸಾನ್ ರೈಲು ದೊಡ್ಡನತ್ತದಿಂದ ದೆಹಲಿಯ ಆದರ್ಶ ನಗರದವರೆಗೆ ಸಂಚರಿಸಲಿದೆ. ಕೃಷಿ ಕ್ಷೇತ್ರದ ಪ್ರಗತಿಗೆ ಮತ್ತು ರೈತರ ವಿವಿಧ ಬೆಳೆಗಳಿಗೆ ಉತ್ತಮ ಬೆಲೆ ದೊರೆಯುವಂತಾಗಲು ದೇಶದ ನಾನಾ ಮೂಲೆಗಳಿಗೆ ಬೆಳೆಗಳನ್ನು ಸಾಗಿಸಲು ಸಹಕಾರಿಯಾಗಲಿದೆ ಎಂದರು.
ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ರೈತರು ಮಳೆಯ ಕೊರತೆ ಮತ್ತು ಅಂತರ್ಜಲ ಕುಸಿತದ ನಡುವೆಯೂ ರಾಜ್ಯಕ್ಕೆ ಮಾದರಿಯಾಗುವಂತೆ ಗುಣಮಟ್ಟದಿಂದ ಕೂಡಿದ ವಿವಿಧ ತರಕಾರಿ, ಹೂವು ಮತ್ತು ಹಣ್ಣಿನ ಬೆಳೆಗಳನ್ನು ಬೆಳೆಯುತ್ತಾರೆ. ಈ ಬೆಳೆಗಳಿಗೆ ಸೂಕ್ತ ಬೆಲೆ ದೊರೆಯಬೇಕಾದರೆ ಅವುಗಳನ್ನು ಬೇರೆ ಬೇರೆ ಕಡೆಗಳಿಗೆ ಸುಲಭವಾಗಿ ಸಾಗಾಣಿಕೆ ಮಾಡುವುದು ಅತ್ಯಗತ್ಯ.
ಈ ನಿಟ್ಟಿನಲ್ಲಿ ಪ್ರಧಾನಮಂತ್ರಿಗಳ ಸೂಚನೆಯಂತೆ ರೈತರಿಗೆ ಅನುಕೂಲ ಮಾಡಿಕೊಡಲು ಕೇಂದ್ರ ಕೃಷಿ ಇಲಾಖೆ ಮತ್ತು ರೈಲ್ವೆ ಇಲಾಖೆ ಸಹಯೋಗದಲ್ಲಿ ಕಿಸಾನ್ ರೈಲಿಗೆ ರಾಷ್ಟ್ರಮಟ್ಟದಲ್ಲಿ ಈಗಾಗಲೇ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಕಿಸಾನ್ ರೈಲು ಸಂಚಾರದಿಂದ ಈ ಬರಪೀಡಿತ ಚಿಕ್ಕಬಳ್ಳಾಪುರ ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ರೈತರಿಗೆ ಹೆಚ್ಚು ಪ್ರಯೋಜನವಾಗಲಿದೆ. ಗ್ರಾಮೀಣ ಭಾಗದಿಂದ ದೇಶದ ರಾಜಧಾನಿ ದೆಹಲಿಯ ಆದರ್ಶನಗರದವರೆಗೆ ಸಂಚರಿಸುವ ಈ ಕಿಸಾನ್ ರೈಲು ರೈತರ ಉತ್ಪನ್ನಗಳನ್ನು ದೇಶದ ಮೂಲೆ ಮೂಲೆಗಳಿಗೆ ತಲುಪಿಸಿ ರೈತರು ಉತ್ತಮ ಬೆಲೆಯ ಜೊತೆಗೆ ಲಾಭ ಪಡೆಯಲು ಸಹಕಾರಿಯಾಗಲಿದೆ. ಇದು ರೈತರು ಸ್ವಾವಲಂಬಿಗಳಾಗಲು ಪೂರಕವಾದ ವಿಶಿಷ್ಟ ಯೋಜನೆಯಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: 2ನೇ ಮದುವೆ: ಪುಟ್ಟ ಕಂದನನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ!
ಇದೇ ಸಂದರ್ಭದಲ್ಲಿ ಮಾತನಾಡಿದ ಚಿಂತಾಮಣಿ ಶಾಸಕ ಎಂ.ಕೃಷ್ಣಾರೆಡ್ಡಿ, ಈ ರೈಲು ಸಂಚಾರ ಕಲ್ಪಿಸಿ ಕೊಟ್ಟಿರೋದು ಖುಷಿಯ ಸಂಗತಿ. ಪ್ರಸ್ತುತ ಸಂದರ್ಭದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ಈ ರೈಲಿನ ಮುಖಾಂತರ ಕೃಷಿ ಉತ್ಪನ್ನಗಳನ್ನು ಕಡಿಮೆ ವೆಚ್ಚದಲ್ಲಿ ರವಾನಿಸಬಹುದಾಗಿದೆ. ಈ ವ್ಯವಸ್ಥೆ ಕಲ್ಪಿಸಿಕೊಟ್ಟ ಕೃಷಿ ಸಚಿವರಿಗೆ ಹಾಗೂ ರೈಲ್ವೆ ಸಚಿವರಿಗೂ ಕೃತಜ್ಞತೆಗಳು ಎಂದು ಹೇಳಿದರು.