ಗೌರಿಬಿದನೂರು(ಚಿಕ್ಕಬಳ್ಳಾಪುರ): ನಗರದ ಸೂರ್ಯ ಕಲ್ಯಾಣ ಮಂಟಪದಲ್ಲಿ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಆಗ್ನೇಯ ಪದವೀಧರ ಕ್ಷೇತ್ರದ ಮತದಾರರ ಪರ ಮತಯಾಚನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಿಜೆಪಿ ಅಭ್ಯರ್ಥಿಯ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಪದವೀಧರರ ಕ್ಷೇತ್ರದಲ್ಲಿ ಮತದಾರರು ಬಹಳ ಪ್ರಬುದ್ಧರಾಗಿದ್ದು, ಜಾತಿ ನೋಡದೇ ಕೇವಲ ಅಭಿವೃದ್ದಿ ಮಾತ್ರ ನೋಡಿ ಮತ ಹಾಕುವುದು ಎಂಬುದು ಮೇಲ್ಕೋಟಕ್ಕೆ ಕಂಡು ಬಂದಿದೆ. ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿಯಿಂದ ಶಿಕ್ಷಣ ಕ್ಷೇತ್ರದ ಅಭಿವೃದ್ದಿ ಶೂನ್ಯವಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿ ಸರಕಾರದ ಮುಖ್ಯಮಂತ್ರಿ ಯಡಿಯೂರಪ್ಪ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿ ಅದರಲ್ಲಿರುವ ಅನೇಕ ಸಮಸ್ಯೆಗಳನ್ನು ಬಗೆಹರಿಸುವ ಗುರಿ ಹೊಂದಿದ್ದಾರೆ. ನಿರುದ್ಯೋಗ ಪದವೀಧರರಲ್ಲಿ ಅನೇಕ ಸಮಸ್ಯೆಗಳು ಇದ್ದು, ಅವುಗಳನ್ನು ಹಂತ ಹಂತವಾಗಿ ಬಗೆಹರಿಸಿ, ಪರಿಹಾರ ಕಲ್ಪಿಸಲು ಮುಂದಾಗಲಿದ್ದೇವೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಪರ್ವ ಆರಂಭವಾಗಿದ್ದು, ಈ ಬಾರೀ ಪದವೀಧರರ ಕ್ಷೇತ್ರದಲ್ಲಿ ಪ್ರಬುದ್ಧ ಮತದಾರರು ಬಿಜೆಪಿ ಆಯ್ಕೆ ಮಾಡುವ ಎಲ್ಲ ಲಕ್ಷಣಗಳು ಕಂಡು ಬಂದಿವೆ. ನಮ್ಮ ಪಕ್ಷದ ಅಭ್ಯರ್ಥಿ ಚಿದಾನಂದ ಆಯ್ಕೆ ಖಚಿತವಾಗಿದೆ ಎಂದು ಭವಿಷ್ಯ ನುಡಿದರು.
ಉಪ ಸಮರ ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ಗೆಲವು ಖಚಿತವಾಗಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಲ್ಲಿ ಮುಖಂಡರ ನಡುವೇ ಗೊಂದಲಗಳಿದ್ದು, ಅವರು ಆರೋಪ ಪ್ರತ್ಯಾರೋಪದಲ್ಲಿ ಮುಳಗಿದ್ದಾರೆ. ರಾಜ್ಯ ಸರಕಾರವು ಅಭಿವೃದ್ದಿಗೆ ಹೆಚ್ಚು ಗಮನ ಹರಿಸಿದ್ದು, ಇದನ್ನು ಸಹಿಸದೇ ವಿರೋಧ ಪಕ್ಷಗಳು ಕೇವಲ ಆರೋಪದಲ್ಲಿ ಮುಳಗಿವೆ. ನಮ್ಮ ಸರ್ಕಾರದ ಅಭಿವೃದ್ದಿ ಸಹಿಸದ ಮುಖಂಡರುಗಳು ಇನ್ನಿಲ್ಲದ ಪೊಳ್ಳು ಆರೋಪ ಮಾಡುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದವಾಗಿದೆ ಎಂದು ವಿರೋಧ ಪಕ್ಷಗಳಿಗೆ ಟಾಂಗ್ ನೀಡಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ವೈ.ಎ ನಾರಾಯಸ್ವಾಮಿ, ಬಿಜೆಪಿ ಮುಖಂಡ ರವಿ ನಾರಾಯಣ ರೆಡ್ಡಿ, ಮಾಜಿ ಶಾಸಕಿ ಎನ್.ಜ್ಯೋತಿರೆಡ್ಡಿ, ತಾಲೂಕು ಅಧ್ಯಕ್ಷ ರಮೇಶ್‍ರಾವ್ ಶಿಳ್ಕೆ, ನಗರ ಘಟಕದ ಅಧ್ಯಕ್ಷ ಮಾರ್ಕೆಟ್ ಮೋಹನ್, ಜಿಲ್ಲಾ ಅಧ್ಯಕ್ಷ ರಾಮಲಿಂಗಪ್ಪ, ಕೇಶವಪ್ರಸಾದ್ ಸೇರಿದಂತೆ ಮತ್ತಿತ್ತರು ಭಾಗಿಯಾಗಿದ್ದರು.