ಚಿಕ್ಕಬಳ್ಳಾಪುರ: ದ್ರಾಕ್ಷಿ ಬೆಳೆಗಾರರ ಕಷ್ಟಕ್ಕೆ ಸ್ಪಂದಿಸಿರುವ ಸಂಸದ ಡಿ.ಕೆ.ಸುರೇಶ್ ಅವರು, ನೇರವಾಗಿ ಜಿಲ್ಲೆಯ ರೈತರ ತೋಟಗಳಿಗೆ ಭೇಟಿ ನೀಡಿ ದ್ರಾಕ್ಷಿ ಖರೀದಿಸುವ ಭರವಸೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಸಾಸೇನಹಳ್ಳಿ ಗ್ರಾಮದ ರೈತ ಚೌಡರೆಡ್ಡಿ ಅವರ ತೋಟಕ್ಕೆ ಡಿ.ಕೆ.ಸುರೇಶ್ ಭೇಟಿ ನೀಡಿದರು. ತೋಟ ಪರಿಶೀಲನೆ ನಡೆಸಿದ ಅವರು, ತೋಟದಲ್ಲಿ ಬೆಳೆದಿರುವ ಎಲ್ಲಾ ದ್ರಾಕ್ಷಿಯನ್ನು ತಮಗೆ ನೀಡಿ. ನಾನು ಖರೀದಿಸುತ್ತೇನೆ ಎಂದು ತಿಳಿಸಿದರು.
ಅದಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ನಿಯಂತ್ರಣ ವಿಚಾರದಲ್ಲಿ ಸಚಿವರ ಹಾಗೂ ಅಧಿಕಾರಿಗಳ ನಡುವೆ ಗೊಂದಲವಿದೆ. ಮದ್ಯ ಮಾರಾಟಕ್ಕೆ ಅವಕಾಶ ಕೊಡುವಂತೆ ಎರಡು ಬಾರಿ ರಾಜ್ಯ ಸರ್ಕಾರ ಪತ್ರ ಬರೆದಿದ್ದರೂ, ಅದಕ್ಕೆ ಪ್ರಧಾನಿ ಮೋದಿ ಸ್ಪಂದಿಸಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೊರೊನಾ ಬಿಕ್ಕಟ್ಟು ಕುರಿತು ರೈತರಿಗೆ ರಾಜ್ಯ ಸರ್ಕಾರ ಆತ್ಮಸ್ಥೈರ್ಯ ಮೂಡಿಸಿಲ್ಲ. ಅವರಿಗೆ ಉಚಿತವಾಗಿ ಮಾಸ್ಕ್, ಸ್ಯಾನಿಟೈಸರ್ ವಿತರಿಸಿಲ್ಲ. ಜನ ಹೊರಗಡೆ ಬಂದರೆ ದಂಡ ಹಾಕುತ್ತೇವೆ ಎಂದು ಭೀತಿ ಹುಟ್ಟಿಸುತ್ತಿದೆ. ಅವರು ಎಲ್ಲಿಂದ ದುಡ್ಡು ತರಬೇಕು? ಹೇಗೆ ದಂಡ ಕಟ್ಟಬೇಕು? ಲಾಕ್ಡೌನ್ ಆದ ಕಾರಣ ಅಕ್ಕಿ ಕೊಟ್ಟಿದ್ದು ಬಿಟ್ಟು ಸರ್ಕಾರ ಬೇರೇನೂ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.