ಚಿಕ್ಕಬಳ್ಳಾಪುರ: ನಿರಂತರವಾಗಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಳೆಗೆ ಸ್ಪರ್ಧೆಯೆಂಬಂತೆ ಕಳೆಯೂ ಬೆಳೆಯುತ್ತಿದ್ದು, ಅದರ ನಿವಾರಣೆ ಮಾಡುವುದು ಸವಾಲಿನ ಕೆಲಸವಾಗಿದೆ. ಹಾಗಾಗಿ ಕೃಷಿ ಕೂಲಿ ಕಾರ್ಮಿಕರಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಲೇ ಇದೆ.
ಕೊರೊನಾ ಆತಂಕದಿಂದ ನಗರಗಳಿಂದ ವಾಪಸ್ ಆದ ಬಹುತೇಕ ಕುಟುಂಬಗಳು ತಮಗಿದ್ದ ಅಲ್ಪಸ್ವಲ್ಪ ಜಮೀನುಗಳನ್ನು ಬಿಡದಂತೆ ಬೆಳೆ ಹಾಕಲು ಮುಂದಾಗಿದ್ದಾರೆ. ತಾಲೂಕಿನಲ್ಲಿ ಬಹುತೇಕ ಬಿತ್ತನೆ ಕಾರ್ಯ ಮುಗಿದಿದೆ. ಇನ್ನೇನಿದ್ದರೂ ಬೆಳೆ ನಿರ್ವಹಣೆಯ ಕಾರ್ಯವೇ ಸವಾಲಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆ ವೇಗವಾಗಿ ಬೆಳೆಯುತ್ತಿದೆ. ಅದರ ಜೊತೆಗೆ ಬೆಳೆ ನಾಶ ಮಾಡುವ ಮಟ್ಟಿಗೆ ಕಳೆ ಬೆಳೆಯುತ್ತಿರುವುದು ರೈತರನ್ನು ಚಿಂತೆಗೆ ಈಡು ಮಾಡಿದೆ.

ನಿತ್ಯವೂ ಬೆಳಗಾದ ಕೂಡಲೇ ಗ್ರಾಮಗಳಲ್ಲಿ ಕೂಲಿಕಾರ್ಮಿಕರನ್ನು ಕರೆದೊಯ್ಯಲು ಆಟೋಗಳು ನಿಲ್ಲುವಂತಾಗಿದೆ. ಆದರೂ ಕೃಷಿ ಕೂಲಿಕಾರ್ಮಿಕರು ಸಿಗುವುದು ಕಷ್ಟವಾಗಿದೆ.
ರೈತನಿಗೆ ಕಳೆ ತೆಗೆಸುವ ಚಿಂತೆ
’’ನಾನು ಸುಮಾರು ದಶಕಗಳಿಂದ ನನ್ನ ಜಮೀನಿನಲ್ಲಿ ಶೇಂಗಾ ಬೆಳೆ ಹಾಕುತ್ತಿದ್ದೇನೆ. ಯಾವ ವರ್ಷವೂ ಸಮಯಕ್ಕೆ ಸರಿಯಾಗಿ ಸಮರ್ಪಕವಾಗಿ ಮಳೆಯಾಗುತ್ತಿರಲಿಲ್ಲ. ಕಳೆದ ಮುಂಗಾರು ಆರಂಭವೂ ಹಾಗೇ ಇತ್ತು. ನಂತರ ಸ್ವಲ್ಪ ತಡವಾದರೂ ಸಮರ್ಪಕವಾಗಿ ಸೂಕ್ತ ಸಮಯಕ್ಕೆ ಮಳೆಯಾಗುತ್ತಿರುವುದರಿಂದ ಈ ಕಳೆ ಹೆಚ್ಚಾಗುತ್ತಿದೆ. ಕಳೆ ನಿವಾರಣೆ ಮಾಡದಿದ್ದರೆ ಬೆಳೆಗೆ ಹಾನಿಯಾಗುವ ಸಾಧ್ಯತೆ ಇದೆ. ಕೂಲಿಯ ಬೆಲೆ ಹೆಚ್ಚಾದರೂ ಪರವಾಗಿಲ್ಲ ಕಳೆ ತೆಗೆಸಲೇಬೇಕು’’ ಎಂದು ರೈತ ನಾಗರಾಜಪ್ಪ ತಿಳಿಸಿದ್ದಾರೆ.
ದಿನಗೂಲಿ ಈಗ 300 - 350 ರೂ.
ಈ ಹಿಂದೆ ನಮ್ಮೂರುಗಳಲ್ಲಿ ಅಬ್ಬಬ್ಬ ಎಂದರೆ ₹150 ಕೊಡ್ತಿದ್ದರು. ಆದರೆ ಈಗ ₹300ಗಳಷ್ಟು ಸಿಗುತ್ತಿದೆ. ಪಕ್ಕದ ಊರುಗಳ ಹೊಲಗಳಿಗೆ ಹೋದರೆ ₹350ರವರೆಗೂ ಕೂಲಿ ಸಿಗುತ್ತೆ ಎನ್ನುತ್ತಾರೆ ಕೃಷಿ ಕಾರ್ಮಿಕ ಮಹಿಳೆ ಶಾಮಲಮ್ಮ.