ಗುಡಿಬಂಡೆ: ಸುಮಾರು 25 ವರ್ಷಗಳಿಂದ ಪಟ್ಟಣದ ಓಬಳದೇವರ ಗುಡ್ಡದ ಬಳಿ ವಾಸವಿರುವ ಹಕ್ಕಿಪಿಕ್ಕಿ ಜನಾಂಗದವರಿಗೆ ತಾಲೂಕು ಆಡಳಿತದಿಂದ ಗುರುತಿನ ಚೀಟಿ ನೀಡುವಂತೆ ಒತ್ತಾಯಿಸಿ ಸಿಪಿಎಂ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಸಿಪಿಎಂ ಪಕ್ಷದ ಮುಖಂಡ ಲಕ್ಷ್ಮೀನಾರಾಯಣ, ಹಲವು ವರ್ಷಗಳಿಂದ ಗುಡಿಬಂಡೆಯಲ್ಲಿಯೇ ವಾಸವಿರುವ ಹಕ್ಕಿಪಿಕ್ಕಿ ಜನಾಂಗಕ್ಕೆ ಇಲ್ಲಿಯವರೆಗೂ ತಾಲೂಕು ಆಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾಗಿದೆ. ಇವರಲ್ಲಿ ಕೆಲವರು ಭಿಕ್ಷೆ ಬೇಡಿ ಬದುಕುತ್ತಿದ್ದರೇ, ಕೆಲವರು ಸಣ್ಣ ಪುಟ್ಟ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಕೊರೊನಾ ಸಮಯದಲ್ಲಿ ಅವರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಸರ್ಕಾರಿ ಜಾಗದಲ್ಲಿ ಬಟ್ಟೆಗಳಿಂದ ಮಾಡಿರುವ ಗುಡಾರಗಳಲ್ಲಿ ಜೀವನ ನಡೆಸುತ್ತಿರುವ ಇವರು, ಮಳೆಗಾಲ ಪ್ರಾರಂಭವಾಗಿರುವುದರಿಂದ ಇನಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ತಾಲೂಕು ಆಡಳಿತ ಇವರಿಗೆ ಗುರುತಿನ ಚೀಟಿ ನೀಡಬೇಕೆಂದು ಆಗ್ರಹಿಸಿ ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿ ತಹಶೀಲ್ದಾರ್, ಓಬಳದೇವರ ಗುಡ್ಡದ ಬಳಿ ವಾಸವಿರುವ ಇವರು ಬೇರೆ ಪ್ರದೇಶಗಳಿಂದ ವಲಸೆ ಬಂದವರು. ಅವರ ಮೂಲ ಸ್ಥಳದ ದಾಖಲೆ ನೀಡಿದರೇ, ಇಲ್ಲಿನ ವಿಳಾಸಕ್ಕೆ ಬದಲಾವಣೆ ಮಾಡಬಹುದು. ದಾಖಲೆಗಳೇ ಇಲ್ಲದಂತಹವರಿಗೆ ಗುರುತಿನ ಚೀಟಿ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.