ಬಾಗೇಪಲ್ಲಿ (ಚಿಕ್ಕಬಳ್ಳಾಪುರ): ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ ಮೂರು ಬಾರಿ ಸಿಪಿಐ ಎಂ ಪಕ್ಷ ಗೆದ್ದಿದೆ. ಅದೇ ರೀತಿಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿಯೂ ನಮ್ಮ ಪಕ್ಷ ಗೆಲ್ಲಬೇಕು. ಅದಕ್ಕಾಗಿ ಈಗಿನಿಂದಲೇ ಶ್ರಮಿಸಬೇಕು. ಈ ರಾಜ್ಯ ಮಟ್ಟದ ರಾಜಕೀಯ ಸಮಾವೇಶವು ಮುಂದಿನ ವಿಧಾನಸಭಾ ಚುನಾವಣೆಗೆ ಮುನ್ನುಡಿ ಬರೆಯಲಿದೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಶಯ ವ್ಯಕ್ತಪಡಿಸಿದರು.
ಬಾಗೇಪಲ್ಲಿ ಹೊರವಲಯದ ಕೆ.ಹೆಚ್.ಬಿ ಲೇಔಟ್‍ನಲ್ಲಿ ಇಂದು ಏರ್ಪಡಿಸಲಾಗಿದ್ದ ಸಿಪಿಐ ಎಂ ಪಕ್ಷದ ರಾಜ್ಯ ಮಟ್ಟದ ರಾಜಕೀಯ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೇರಳ ರಾಜ್ಯದಲ್ಲಿ ಅನೇಕ ಜನಪರವಾದಂತಹ ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದೆ. ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸುತ್ತಿದ್ದು, ಕೇರಳ ಸರ್ಕಾರ ಇಡೀ ರಾಷ್ಟ್ರಕ್ಕೆ ಮಾದರಿಯಾಗಿದೆ. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಭಯೋತ್ಪಾದನೆಯನ್ನು ಹುಟ್ಟುಹಾಕುವಂತಿದೆ. ಉತ್ತರಪ್ರದೇಶದಲ್ಲಿ ಸರ್ವಾಧಿಕಾರಿ ಆಡಳಿತವಿದ್ದು, ಹೆಣ್ಣುಮಕ್ಕಳ ಅತ್ಯಾಚಾರ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಳಿಯಾಳಂ ಭಾಷೆಯಲ್ಲಿ ಮಾತನಾಡಿದರು, ಅದನ್ನು ಕನ್ನಡಕ್ಕೆ ಶ್ಯಾಂಭಟ್ ಅವರು ಅನುವಾದ ಮಾಡಿದರು. ಕೇಂದ್ರ ಪಾಲಿಟ್ ಬ್ಯೂರೋ ಸದಸ್ಯ ಎಂ.ಎ.ಬೇಬಿ, ಜಿ.ವಿ.ರಾಘವುಲು, ಕೆ.ಎನ್.ಉಮೇಶ್, ರಾಜ್ಯ ಕಾರ್ಯದರ್ಶಿ ಯು.ಬಸವರಾಜ್, ಮುಖಂಡರಾದ ಎಸ್.ವರಲಕ್ಷ್ಮಿ ಎಂ.ಪಿ. ಮುನಿವೆಂಕಟಪ್ಪ, ಬಿ.ಸಾವಿತ್ರಮ್ಮ, ಮಂಜುನಾಥರೆಡ್ಡಿ, ಮಹಮ್ಮದ್‍ಅಕ್ರಂ, ರಘುರಾಮರೆಡ್ಡಿ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ಕೆಂಬಾವುಟಗಳಿಂದ ಅಲಂಕಾರಗೊಂಡ ಪಟ್ಟಣ: ಸಿಪಿಐ ಎಂ ಪಕ್ಷದ ರಾಜ್ಯ ಮಟ್ಟದ ರಾಜಕೀಯ ಸಮಾವೇಶದ ಹಿನ್ನೆಲೆ ಪಟ್ಟಣವನ್ನು ಕೆಂಬಾವುಟ, ಫ್ಲೆಕ್ಸ್, ಬ್ಯಾನರ್ಹಳು ರಾರಾಜಿಸಿದವು. ಪಟ್ಟಣದ ನ್ಯಾಷನಲ್ ಕಾಲೇಜಿನಿಂದ ಕಾರ್ಯಕ್ರಮ ಆಯೋಜನೆ ಆಗಿದ್ದ ಕೆ.ಹೆಚ್.ಬಿ ಲೇಔಟ್ ವರೆಗೆ ಮೆರವಣಿಗೆ ಸೇರಿಕೊಂಡಿತು. ಮೆರವಣಿಗೆಯಲ್ಲಿ ಚಕ್ಕೆ ಭಜನೆ, ಲಂಬಾಣಿಯರ ಕೋಲಾಟ, ಡೊಳ್ಳು ಕುಣಿತ, ತಮಟೆಯ ವಾದನ, ನಾದಸ್ವರ ಮತ್ತು ಮಂಗಳವಾದ್ಯಗಳ ತಂಡಗಳು ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದವು.ಸಮಾವೇಶಕ್ಕೆ ರಾಜ್ಯದ ಹಲವೆಡೆಯಿಂದ ಕಾರ್ಯಕರ್ತರು ಆಗಮಿಸಿದ್ದರು.
(ಇದನ್ನೂ ಓದಿ: ಬೊಮ್ಮಾಯಿ ಭೇಟಿ ಮಾಡಿದ ಕೇರಳ ಸಿಎಂ: ರೈಲ್ವೆ ಯೋಜನೆಗಳ ಕುರಿತು ಮಹತ್ವದ ಮಾತುಕತೆ)