ಚಿಕ್ಕಬಳ್ಳಾಪುರ: ಸಚಿವೆ ಹಾಗೂ ಜಲ್ಲಾಧಿಕಾರಿಗಳಿಗೆ ಭದ್ರತೆ ನೀಡಿದ್ದ ಪೊಲೀಸ್ ಅಧಿಕಾರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಜಿಲ್ಲೆಯ ಅಧಿಕಾರಿಗಳ ನಿದ್ದೆಗೆಡಿಸಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಹಾಗೂ ಜಿಲ್ಲಾಧಿಕಾರಿ ಆರ್. ಲತಾ, ಎಸ್ಪಿ ಮಿಥುನ್ ಕುಮಾರ್ ಸೇರಿದಂತೆ ಜಿಲ್ಲೆಯ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಭವನದಲ್ಲಿ ಸಭೆಯನ್ನು ನಡೆಸಿ ನಂತರ ಶಿಡ್ಲಘಟ್ಟ ತಾಲೂಕಿಗೆ ಭೇಟಿ ನೀಡಿದ್ದರು. ಇದೇ ವೇಳೆ ಅಧಿಕಾರಿಗಳ ಭದ್ರತೆಯ ಸಲುವಾಗಿ ನೇಮಕವಾಗಿದ್ದ ಗ್ರಾಮಾಂತರ ಠಾಣೆಯ ಪಿಎಸ್ಐಗೆ ಕೊರೊನಾ ಸೋಂಕು ಧೃಡಪಟ್ಟಿದೆ.
ಶಿಡ್ಲಘಟ್ಟ ಗ್ರಾಮಾಂತರ ಠಾಣೆಯ ಪಿಎಸ್ಐ ಇತ್ತೀಚೆಗಷ್ಟೆ ಮಂಡ್ಯ ಜಿಲ್ಲೆಗೆ ಭೇಟಿ ನೀಡಿದ್ದು, ನಂತರ ಕೊರೊನಾ ಪರೀಕ್ಷೆಯನ್ನು ಮಾಡಿಸಿಕೊಂಡಿದ್ದರು. ಸದ್ಯ ಇಂದು ಕೊರೊನಾ ಸೋಂಕು ಇರುವುದು ಧೃಡಪಟ್ಟಿದ್ದು ಜಿಲ್ಲಾಧಿಕಾರಿ ಸೇರಿದಂತೆ ತಾಲೂಕಿನ ಅಧಿಕಾರಿಗಳಿಗೆ ಆತಂಕ ಶುರುವಾಗಿದೆ.
ಈಗಾಗಲೇ ಪೊಲೀಸ್ ಠಾಣೆ ಸೇರಿದಂತೆ ಪೊಲೀಸ್ ಅಧಿಕಾರಿಯ ಮನೆಯನ್ನು ಸೀಲ್ಡೌನ್ ಮಾಡಲಾಗಿದ್ದು, ಕುಟುಂಬಸ್ಥರಿಗೆ ಹಾಗೂ ಪೊಲೀಸ್ ಠಾಣೆ ಸಿಬ್ಬಂದಿಗೆ ಹೋಮ್ ಕ್ವಾರಂಟೈನ್ ಆಗುವಂತೆ ಸೂಚನೆ ನೀಡಲಾಗಿದೆ.
ಓರ್ವ ಅಧಿಕಾರಿಗೆ ಸೋಂಕು ದೃಢಪಟ್ಟಿದ್ದು, ಜಿಲ್ಲಾಸ್ಪತ್ರೆಯ ಐಸೊಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು 6 ಜನ ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 183ಕ್ಕೆ ಏರಿಕೆಯಾಗಿದೆ.