ಬೆಂಗಳೂರು/ಚಿಕ್ಕಬಳ್ಳಾಪುರ: ಶಿಕಾರಿಪುರಲ್ಲಿ ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ತೂರಾಟ ಆಗಿದೆ ಅಂದರೆ ರಾಜಕೀಯ ದುರುದ್ದೇಶ ಇದೆ ಎಂದೇ ಅರ್ಥ. ಯಡಿಯೂರಪ್ಪ ಅವರ ಸೇವೆಯಿಂದ ಅವರಿಗೆ ಅಲ್ಲಿನ ಜನರ ಬೆಂಬಲ ಸದಾ ಇರುತ್ತದೆ. ಅದನ್ನು ಕದಲಿಸಲು ವಿರೋಧ ಪಕ್ಷದವರು ಈ ಕೆಲಸವನ್ನು ಮಾಡಿದ್ದಾರೆ. ಇದು ಅತ್ಯಂತ ಹೀನ ಮತ್ತು ಖಂಡನೀಯ ಕೆಲಸ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಸ್ಮಾರಕ ಲೋಕಾರ್ಪಣೆ ಮಾಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಎಲ್ಲ ಸಮುದಾಯಗಳನ್ನು ಅತ್ಯಂತ ಪ್ರೀತಿ ವಿಶ್ವಾಸದಿಂದ ತೆಗೆದುಕೊಂಡು ಹೋದವರು ಯಡಿಯೂರಪ್ಪ. ತಾಂಡಾ ಅಭಿವೃದ್ಧಿ ನಿಗಮವನ್ನ ಪ್ರಾರಂಭ ಮಾಡಿದ್ದು ಅವರು. ಕೆಲವರ ತಪ್ಪು ಕಲ್ಪನೆಯಿಂದ ಮತ್ತು ಕೆಲವರ ಪ್ರಚೋದನೆಯಿಂದ ಅವರ ನಿವಾಸದ ಮೇಲೆ ಕಲ್ಲು ತೂರಾಟವಾಗಿದೆ. ಶಿಕಾರಿಪುರಲ್ಲಿ ಹೀಗಾಗಿದೆ ಅಂದರೆ ರಾಜಕೀಯ ದುರುದ್ದೇಶ ಇದೆ ಎಂದರ್ಥ. ಯಡಿಯೂರಪ್ಪ ಅವರ ಸೇವೆಯಿಂದ ಅವರಿಗೆ ಅಲ್ಲಿನ ಜನರ ಬೆಂಬಲ ಸದಾ ಇರುತ್ತದೆ. ಅದನ್ನು ಕದಲಿಸಲು ವಿರೋಧ ಪಕ್ಷದವರು ಈ ಕೆಲಸ ಮಾಡಿದ್ದಾರೆ. ಇದು ಅತ್ಯಂತ ಹೀನ ಮತ್ತು ಖಂಡನೀಯ ಕೆಲಸ ಎಂದರು.
ಬಂಜಾರ ನಮ್ಮ ಸಮುದಾಯ: ಬಂಜಾರ ಸಮುದಾಯ ನಮ್ಮ ಬೆಂಬಲಿತ ಸಮುದಾಯ. ಒಂದೂವರೆ ಲಕ್ಷ ಜನರಿಗೆ ಹಕ್ಕು ಪತ್ರ ಕೊಟ್ಟಿದ್ದೇ. ಇವತ್ತೂ ಅವರಿಗೆ ಹಕ್ಕು ಪತ್ರಗಳನ್ನು ಕೊಟ್ಟಿದ್ದೇವೆ. ನಮ್ಮನ್ನು ಎಸ್ಸಿ ಪಟ್ಟಿಯಿಂದ ಹೊರಹಾಕುತ್ತಾರೆ ಎನ್ನುವ ಆತಂಕ ಇತ್ತು. ಈ ಬಗ್ಗೆ ಫೆಬ್ರವರಿ ತಿಂಗಳಲ್ಲೇ ಕೇಂದ್ರಕ್ಕೆ ಪತ್ರ ಬರೆದು ಶಾಶ್ವತವಾಗಿ ಇವರನ್ನು ಎಸ್ಸಿ ಪಟ್ಟಿಯಲ್ಲೇ ಇಡಬೇಕು ಎಂದು ಶಿಫಾರಸ್ಸು ಮಾಡಿದ್ದೇವೆ ಎಂದರು.
ವರದಿಯನ್ನು ನಾವು ಒಪ್ಪಿಕೊಂಡಿಲ್ಲ: ಯಾವ ವರದಿಯಲ್ಲಿ ಈ ಬಗ್ಗೆ ಆತಂಕ ಇತ್ತೋ, ಅದನ್ನು ನಾವು ಒಪ್ಪಿಕೊಂಡಿಲ್ಲ. ನಾವು ಕ್ಯಾಬಿನೆಟ್ ಸಬ್ ಕಮಿಟಿ ವರದಿಯಂತೆ 4.5% ಗೆ ಹೆಚ್ಚಳ ಮಾಡಿದ್ದೇವೆ. ಅವರ ಆತಂಕ ದೂರ ಮಾಡಿ ಹೆಚ್ಚಿನ ಮೀಸಲಾತಿ ಕೊಟ್ಟಿದ್ದೇವೆ. ರಾಜಕೀಯ ಪ್ರಚೋದನೆ ಮಾಡುವ ಕೆಲಸ ನಿಲ್ಲಬೇಕು. ಈ ಸಂಬಂಧ ಯಡಿಯೂರಪ್ಪ ಅವರಿಗೆ ಸಂಬಂಧವೇ ಇಲ್ಲ. ಅವರಿಗೆ ಹೀಗೆ ಮಾಡಿದ್ದು ನಿಜಕ್ಕೂ ನೋವು ತರಿಸಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ವಿರೋಧ ಪಕ್ಷಗಳ ಪ್ರಚೋದನೆಯಿಂದಲೇ ಈ ಘಟನೆ ಇದೆ. ನಮ್ಮ ನೀತಿಯಿಂದ ಇದು ಜರುಗಿಲ್ಲ. ಎಲ್ಲರಿಗೂ ನ್ಯಾಯ ಕೊಟ್ಟಿದ್ದೀವಿ. ಇದು ರಾಜಕೀಯ ಪ್ರೇರಿತವಾದ ಘಟನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಪ್ರಚೋದನೆಗೆ ಒಳಗಾಗದಂತೆ ಸಿಎಂ ಮನವಿ: ಇದಕ್ಕೂ ಮೊದಲು ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ್ದ ಸಿಎಂ ಬೊಮ್ಮಾಯಿ, ಬಂಜಾರ ಸಮುದಾಯದ ಮುಖಂಡರಲ್ಲಿ ನಾನು ವಿನಂತಿ ಮಾಡುತ್ತೇನೆ. ಮೊದಲನೆಯದಾಗಿ ಸದಾಶಿವ ಆಯೋಗದ ಶಿಫಾರಸು ವರದಿಯನ್ನು ನಾವು ಜಾರಿ ಮಾಡಿಲ್ಲ. ಎಸ್ಸಿ ಲಿಸ್ಟ್ ಇಂದು ತೆಗೆಯುತ್ತಾರೆ ಎಂಬ ಆತಂಕ ಇದೆ. ನಾನೇ ಸ್ವಂತ ಆದೇಶ ಮಾಡಿ ಬೋವಿ, ಲಂಬಾಣಿ, ಕೊರಮ, ಕೊರಚ, ಎಲ್ಲ ಕೂಡ ಎಸ್ಸಿ ಲಿಸ್ಟ್ನಲ್ಲಿ ಇರುತ್ತವೆ. ಯಾವುದೇ ಕಾರಣಕ್ಕೂ ತೆಗೆಯುವ ಪ್ರಶ್ನೆಯೇ ಇಲ್ಲ ಎಂದು ಆದೇಶ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಮೂರು ಪರ್ಸೆಂಟ್ ಬದಲು ನಾಲ್ಕೂವರೆ ಪರ್ಸೆಂಟ್ ಕೊಟ್ಟಿದ್ದೇವೆ. ಮತ್ತು ಮುಂದೆ ಸದಾಶಿವ ಆಯೋಗದ ಕೆಲಸ ಇಲ್ಲ ಅಂತ ನಾವು ತೀರ್ಮಾನ ಸಹ ಮಾಡಿದ್ದೇವೆ ಎಂದರು.
ಅವರ ಬೇಡಿಕೆ ಪ್ರಕಾರ ಮಾಡಿದ್ದೇವೆ. ಯಾವುದೇ ಗೊಂದಲ ಇಲ್ಲ, ಸಮುದಾಯದ ಹಿತರಕ್ಷಣೆ ಮಾಡಿದ್ದೇವೆ. 2 ಲಕ್ಷದ ಹಕ್ಕು ಪತ್ರಗಳನ್ನ ಲಂಬಾಣಿ ತಾಂಡಾದ ಜನರಿಗೆ ಕೊಟ್ಟಾಗಿದೆ. ನಿಮ್ಮ ಪರವಾಗಿ ಬಿಜೆಪಿ ಸರ್ಕಾರ ಇದೆ. ತಾಂಡಾ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದವರು ಯಡಿಯೂರಪ್ಪನವರು. ಆ ಭಾಗದ ಎಲ್ಲಾ ತಾಂಡಾಗಳಿಗೆ ಮೂಲಭೂತ ಸೌಲಭ್ಯಗಳನ್ನು ಕೊಟ್ಟವರು ಬಿಎಸ್ವೈ. ಹಿಂಸೆಗೆ ಅವಕಾಶ ಇಲ್ಲ. ಏನೇ ವಿಷಯ ಇದ್ರೂ ಕುಳಿತು ಬಗೆಹರಿಸೋಣ ಎಂದು ಸಿಎಂ ಹೇಳಿದರು.
ಕಾಂಗ್ರೆಸ್ನವರ ಕೃತ್ಯವನ್ನು ನಾನು ಖಂಡಿಸುತ್ತೇನೆ- ಸಿಎಂ ಬೊಮ್ಮಾಯಿ: ಎರಡನೇದಾಗಿ ಇದರಲ್ಲಿ ಕಾಂಗ್ರೆಸ್ ಪ್ರಚೋದನೆ ಇದೆ ಎಂದು ಆರೋಪಿಸಿದ ಸಿಎಂ, ಸಾಮಾಜಿಕ ನ್ಯಾಯ ನೀಡಿದ ಮೇಲೆ ತಡೆದುಕೊಳ್ಳಲು ಆಗದೆ ಹಿಂಸೆಗೆ ಪ್ರಚೋದನೆ ನೀಡಿದ್ದಾರೆ. ಈ ಪ್ರಚೋದನೆಗೆ ಬಂಜಾರ ಸಮುದಾಯ ಒಳಗಾಗಬಾರದು. ಬಂಜಾರ ಸಮುದಾಯದ ರಕ್ಷಣೆ ಮೊದಲಿಂದಲೂ ಬಿಜೆಪಿ ಮಾಡಿದೆ. ಮುಂದೆಯೂ ಮಾಡುತ್ತದೆ. ತಪ್ಪು ದಾರಿಗೆ ಎಳೆಯುವ ಪ್ರಯತ್ನಗಳಿಗೆ ಅವಕಾಶ ಮಾಡಿಕೊಡಬಾರದು. ಇಂತಹ ಕಾಂಗ್ರೆಸ್ನವರ ಕೃತ್ಯವನ್ನು ನಾನು ಖಂಡಿಸುತ್ತೇನೆ. ಸಮಾಜದಲ್ಲಿ ರಾಜಕೀಯ ಲಾಭಕ್ಕಾಗಿ ಹಿಂಸೆಗೆ ಇಳಿಸುವುದು ಶೋಭೆ ತರುವುದಲ್ಲ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಅವರು ಕ್ಷಮೆಗೆ ಅರ್ಹರಲ್ಲ. ರಾಷ್ಟ್ರೀಯ ಪಕ್ಷ ಮಾಡುತ್ತಿರುವುದು ಅತ್ಯಂತ ಸಣ್ಣ ಕೆಲಸ. ಈಗ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಹೇಳಬೇಕು. ಜನರ ಮಧ್ಯೆ ಜಗಳ ಹಚ್ಚೋ ಶಕುನಿ ಯಾರು ಅಂತ. ಯಾರಾದ್ರೂ ಇದ್ರೆ ಅದು ಕಾಂಗ್ರೆಸ್ ಪಕ್ಷ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು.
ಬಿಎಸ್ವೈ ಮನೆ ಮೇಲೆ ಕಲ್ಲು ತೂರಾಟ : ಒಳಮೀಸಲಾತಿಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಇಂದು ಬಂಜಾರ ಸಮುದಾಯದವರು ಶಿಕಾರಿಪುರದಲ್ಲಿ ಪ್ರತಿಭಟನೆ ನಡೆಸಿದೆ. ಈ ವೇಳೆ ಕೆಲ ಪ್ರತಿಭಟನಾಕಾರರು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಇದನ್ನೂ ಓದಿ : ಒಳಮೀಸಲಾತಿ ವಿಚಾರ.. ಪ್ರತಿಭಟನೆ ವೇಳೆ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ