ಬಾಗೇಪಲ್ಲಿ: ಏಪ್ರಿಲ್ ಹಾಗೂ ಮೇ ತಿಂಗಳ ಗೌರವಧನ ಬಿಡುಗಡೆ ಹಾಗೂ ವಿಶೇಷ ನೆರವು ನೀಡುವಂತೆ ಒತ್ತಾಯಿಸಿ ತಾಲೂಕಿನ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು. ಬಳಿಕ ತಹಶೀಲ್ದಾರ್ ಎಂ. ನಾಗರಾಜು ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಸರ್ಕಾರ ಕೊರೊನಾನಿಂದ ಲಾಕ್‌ಡೌನ್ ಘೋಷಣೆ ಮಾಡಿದ್ದ ಸಂದರ್ಭದಲ್ಲಿ ರಾಜ್ಯದ ವಿವಿಧ ಕಾರ್ಮಿಕರಿಗೆ 5 ಸಾವಿರ ಸಹಾಯಧನವನ್ನು ಘೋಷಣೆ ಮಾಡಿ ಅನುಕೂಲ ಕಲ್ಪಿಸಿದೆ. ಆದರೆ ಪ್ರಾಥಮಿಕ ಶಾಲೆ ಅಡುಗೆ ಸಿಬ್ಬಂದಿ ಸರ್ಕಾರ ನೀಡಿದ ಅಲ್ಪ ಪ್ರಮಾಣದ ಗೌರವಧನವನ್ನು ಪಡೆಯುತ್ತಿದ್ದೇವೆ. ಇದರಲ್ಲೇ ನಮ್ಮ ಕುಟುಂಬದ ಜೊತೆ ಈ ಕೆಲಸ ನಿರ್ವಹಣೆ ಮಾಡಿಕೊಂಡು ಬಂದಿದ್ದೇವೆ.
ಲಾಕ್‌ಡೌನ್ ಘೋಷಣೆ ಮಾಡಿದ ಸಂದರ್ಭದಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳುಗಳಲ್ಲಿ ಯಾವುದೇ ಕೆಲಸವಿಲ್ಲದೆ ಅಡುಗೆ ಸಿಬ್ಬಂದಿ ಮನೆಯಲ್ಲಿಯೇ ಉಳಿಯುವಂತಾಗಿ ಸಾಲ ಮಾಡಿಕೊಂಡಿದ್ದೇವೆ. ಸರ್ಕಾರ ಎಲ್ಲಾ ಕಾರ್ಮಿಕರಂತೆ ಬಿಸಿಯೂಟ ತಯಾರಿಕಾ ಸಿಬ್ಬಂದಿಯನ್ನು ಪರಿಗಣಿಸಿ ಆರ್ಥಿಕ ಮುಗ್ಗಟ್ಟಿನಿಂದ ಚೇತರಿಸಿಕೊಳ್ಳಲು ವಿಶೇಷ ನೆರವು ನೀಡಬೇಕೆಂದು ಮನವಿ ಮಾಡಿದರು.