ಚಿಂತಾಮಣಿ : ನಗರಸಭೆ ಚುನಾವಣೆಗೆ ಗುರುವಾರ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದು ಗುರುವಾರದಿಂದ ನಾಮಪತ್ರಗಳ ಸಲ್ಲಿಕೆ ಆರಂಭವಾಗಿದೆ ಎಂದು ತಾಲೂಕು ದಂಡಾಧಿಕಾರಿಗಳಾದ ಎಸ್ ಎಲ್ ವಿಶ್ವನಾಥ್ ತಿಳಿಸಿದ್ದಾರೆ.
ಚಿಂತಾಮಣಿ ನಗರಸಭೆ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ತಾಲೂಕು ಕಚೇರಿಯಲ್ಲಿ ತುರ್ತು ಸಭೆ ಏರ್ಪಡಿಸಿದ್ದ ತಹಶೀಲ್ದಾರ್ ವಿಶ್ವನಾಥ್, ನಗರಸಭೆಯ 31 ವಾರ್ಡ್ಗಳಿಗೆ ನಾಲ್ವರು ಚುನಾವಣೆ ಅಧಿಕಾರಿಗಳು ಹಾಗೂ ಸಹಾಯಕ ಚುನಾವಣೆ ಅಧಿಕಾರಿಗಳನ್ನು ನೇಮಿಸಲಾಗಿದೆ. ಸಾರ್ವಜನಿಕರಿಗೆ ಯಾವುದೇ ರೀತಿಯ ಮಾಹಿತಿ ಬೇಕಾದರೆ ಆಯಾ ವಾರ್ಡಿಗೆ ಸಂಬಂಧಪಟ್ಟ ಚುನಾವಣೆ ಅಧಿಕಾರಿ ಬಳಿ ಪಡೆದುಬಹುದು ಎಂದು ತಿಳಿಸಿದ್ದಾರೆ.
ನಗರದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಿದೆ. ಅಕ್ಟೋಬರ್ 31ಕ್ಕೆ ನಾಮಪತ್ರ ಸಲ್ಲಿಕೆಗೆ ಕಡೆಯ ದಿನ. ನವೆಂಬರ್ 2ಕ್ಕೆ ನಾಮಪತ್ರ ಪರಿಶೀಲನೆ, ನವೆಂಬರ್ 4 ನಾಮಪತ್ರ ಹಿಂಪಡೆಯಲು ಕೊನೆಯ ದಿನ. ನವೆಂಬರ್ 12ರಂದು ಬೆಳಗ್ಗೆ 7 ರಿಂದ ಸಂಜೆ 7 ಗಂಟೆವರೆಗೆ ಮತದಾನ ನಡೆಯಲಿದೆ. ಮರು ಮತದಾನ ಅವಶ್ಯವಿದ್ದಲ್ಲಿ ನವೆಂಬರ್ 13 ರಂದು ನಡೆಯಲಿದೆ. ನವೆಂಬರ್ 14 ರಂದು ಮತ ಎಣಿಕೆ ನಡೆದು ಅಂದೇ ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಪೌರಾಯುಕ್ತ ಹರೀಶ್, ನಗರ ಪೊಲೀಸ್ ಠಾಣೆ ಆರಕ್ಷಕ, ವೃತ್ತ ನಿರೀಕ್ಷಕ ನಾರಾಯಣಸ್ವಾಮಿ, ಅಬಕಾರಿ ಇಲಾಖೆಯ ಮೋಹನ್, ಸಾರಿಗೆ ಇಲಾಖೆ ನಾಗರಾಜ್ ಸೇರಿದಂತೆ ಚುನಾವಣೆ ಅಧಿಕಾರಿಗಳು ಹಾಗೂ ಸಹಾಯಕ ಚುನಾವಣಾ ಅಧಿಕಾರಿಗಳು ಉಪಸ್ಥಿತರಿದ್ದರು.