ಚಿಂತಾಮಣಿ: ಸ್ಥಳೀಯ ಶಾಸಕರನ್ನು ಆಹ್ವಾನಿಸದೆ ಕಾಮಗಾರಿ ಉದ್ಘಾಟನೆ ಮಾಡಿ ಶಿಷ್ಟಾಚಾರ ಉಲ್ಲಂಘಿಸಿರುವ ಹಕ್ಕುಚ್ಯುತಿ ಪ್ರಕರಣದಲ್ಲಿ ಚಿಂತಾಮಣಿ ನಗರಸಭೆ ಪೌರಾಯುಕ್ತ ಎಚ್.ವಿ.ಹರೀಶ್ ಮತ್ತು ಸಹಾಯಕ ಅಭಿಯಂತರ ಪದ್ಮನಾಭ ರೆಡ್ಡಿ ಅವರನ್ನು ರಾಜ್ಯ ಪೌರಾಡಳಿತ ನಿರ್ದೇಶಕಿ ಬಿ.ಬಿ.ಕಾವೇರಿ ಅಮಾನತುಗೊಳಸಿ ಆದೇಶಿಸಿದ್ದಾರೆ.
ಅಮಾನತುಗೊಂಡಿರುವ ಎಚ್.ವಿ.ಹರೀಶ್ ಅವರನ್ನು ನೆಲಮಂಗಲ ನಗರಸಭೆ ಕಚೇರಿಯ ವ್ಯವಸ್ಥಾಪಕರ ಹುದ್ದೆಗೆ ವರ್ಗಾವಣೆ ಮಾಡುವ ಮೂಲಕ ಹಿಂಬಡ್ತಿ ನೀಡಲಾಗಿದೆ. ಸಹಾಯಕ ಅಭಿಯಂತರ ಪದ್ಮನಾಭರೆಡ್ಡಿ ಅವರನ್ನು ಮಡಿಕೇರಿ ನಗರಸಭೆಯ ಸಹಾಯಕ ಅಭಿಯಂತರ ಹುದ್ದೆಗೆ ಲೀನವಾಗಿ ಬದಲಾಯಿಸಲಾಗಿದೆ ಎಂದು ತಿಳಿದು ಬಂದಿದೆ.
ನಗರ ವಾರ್ಡ್ ನಂ.19 ರಾಮಕುಂಟೆಯಲ್ಲಿ ನಗರೋತ್ಥಾನ ಯೋಜನೆಯಡಿ ಸುಮಾರು 6 ಲಕ್ಷ ರೂಗಳ ವೆಚ್ಚದಲ್ಲಿ ಕೆಳ ಅಂತಸ್ತಿನ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಬದಲಿ ಸ್ಥಳದ ಆಯ್ಕೆ ಪ್ರಕ್ರಿಯೆ ಜಾರಿಯಲ್ಲಿತ್ತು. ಹೀಗಿದ್ದರೂ ಸಹ ಅಂದಾಜುಪಟ್ಟಿಯಲ್ಲಿ ಅನುಮೋದನೆಯಾಗದ ಜಾಗದಲ್ಲೇ ಮೇಲಧಿಕಾರಿಗಳ ಗಮನಕ್ಕೂ ತರದೆ, ಸ್ಥಳೀಯ ಶಾಸಕರನ್ನು ಸಮಾರಂಭಕ್ಕೆ ಆಹ್ವಾನಿಸದೆ ಇಬ್ಬರು ಅಧಿಕಾರಿಗಳು ಅಕ್ಟೋಬರ್‌ನಲ್ಲಿ ಕಾಮಗಾರಿಯ ಗುದ್ದಲಿ ಪೂಜೆಯನ್ನು ನೆರವೇರಿಸಿದ್ದರು.
ಓದಿ: ಪದ್ಮಶ್ರೀ ಪುರಸ್ಕೃತ ಬನ್ನಂಜೆ ಗೋವಿಂದಾಚಾರ್ಯ ಅಸ್ತಂಗತ
ಈ ವಿಚಾರವಾಗಿ ಶಿಷ್ಟಾಚಾರ ಉಲ್ಲಂಘನೆ ಮಾಡಿರುವ ಬಗ್ಗೆ ಕ್ಷೇತ್ರದ ಶಾಸಕರಾದ ಜೆ.ಕೆ.ಕೃಷ್ಣಾರೆಡ್ಡಿ ಇವರಿಬ್ಬರ ವಿರುದ್ಧ ಕಳೆದ ಕೆಲ ದಿನಗಳ ಹಿಂದೆ ಸಲ್ಲಿಸಿದ್ದ ಹಕ್ಕುಚ್ಯುತಿ ಕುರಿತಂತೆ ಸರ್ಕಾರಕ್ಕೆ ಪತ್ರ ಬರೆದು ತನಿಖೆ ನಡೆಸುವಂತೆ ಸೂಚಿಸಿದ್ದರು.