ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ನಗರದಲ್ಲಿ ಜಿಲ್ಲಾಡಳಿತದ ಸಹಯೋಗದೊಂದಿಗೆ ಡಾ.ಕೆ.ಸುಧಾಕರ್ ಫೌಂಡೇಷನ್ ವತಿಯಿಂದ ಶನಿವಾರದಿಂದ ಆಯೋಜಿಸಿರುವ ಎರಡು ದಿನಗಳ ಆರೋಗ್ಯ ಮೇಳ ಹೊಸ ವಿಶ್ವದಾಖಲೆ ಬರೆದಿದೆ. ಎಸ್ಜೆಸಿಐಟಿ ಕಾಲೇಜು ಆವರಣದಲ್ಲಿ ಬೃಹತ್ ಆರೋಗ್ಯ ಮೇಳವನ್ನು ಆಯೋಜನೆ ಮಾಡಲಾಗಿದೆ. ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ಆರೋಗ್ಯ ತಪಾಸಣೆಗೊಳಗಾಗಿದ್ದಾರೆ.
ಈ ಮೂಲಕ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಮೇಳ ಸೇರ್ಪಡೆಯಾಗಿದೆ. ಜಿಲ್ಲೆಯಲ್ಲಿ ರಾಜಕೀಯದ ಜೊತೆಗೆ ಶಿಕ್ಷಣ, ಆರೋಗ್ಯ ಮುಂತಾದ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಲಾಗುತ್ತದೆ. ಕೇಂದ್ರ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಕಾಣಿಕೆ ನೀಡಿದೆ. ಅಲ್ಲದೇ ಕೊರೊನಾ ಕಾಲದಲ್ಲಿ ಔಷಧಗಳ ಉತ್ಪಾದನೆಯಲ್ಲಿ ವಿಶ್ವಕ್ಕೆ ಮಾದರಿಯಾಗಿದೆ. ಈ ಮೇಳಕ್ಕೆ 25 ರಿಂದ 30 ಸಾವಿರ ಜನರು ಬರುವ ನಿರೀಕ್ಷೆಯಲ್ಲಿ ಇದ್ದೆ. ಆದರೆ, ನಿರೀಕ್ಷೆಗೂ ಮೀರಿ ಜನರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಸಚಿವ ಸುಧಾಕರ್ ಹೇಳಿದರು.
ಸರ್ಕಾರ ಎಂದರೆ ಬರೀ ಕಟ್ಟಡಗಳ ಒಳಗೆ ಕೆಲಸ ಮಾಡುವುದಲ್ಲ. ಜನರ ಮನೆ ಬಾಗಿಲಿಗೆ ಹೋಗುವ ಸರ್ಕಾರ ಬರಬೇಕು. ಜನರ ಮನೆ ಬಾಗಿಲಿಗೆ ಸರ್ಕಾರವನ್ನು ತೆಗೆದುಕೊಂಡು ಹೋದ ಕೀರ್ತಿ ಸುಧಾಕರ್ಗೆ ಸಲ್ಲುತ್ತದೆ. ಈ ಹಿಂದೆ ಕೆಲವು ಸರ್ಕಾರಗಳ ಕೆಲಸ ಬಿಲ್ಡಿಂಗ್ಗಳಿಗೆ ಮಾತ್ರ ಸೀಮಿತ ಆಗಿತ್ತು. ಆದರೆ, ಈಗ ಕಾಲ ಬದಲಾಗಿದೆ.
ಈ ಮೇಳದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಇಂತಹದೇ ಆರೋಗ್ಯ ಮೇಳವನ್ನು ಆಯೋಜಿಸಬೇಕು. ಈ ಜಿಲ್ಲೆಯಲ್ಲಿ ನಡೆದಂತೆ ಬೇರೆ ಜಿಲ್ಲೆಗಳ ಸಚಿವರು, ಮಠಾಧೀಶರನ್ನು ಸೇರಿಸಿ ಆರೋಗ್ಯ ಮೇಳ ನಡೆಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸರ್ಕಾರ ಹಾಗೂ ಆರೋಗ್ಯ ಸಚಿವರಲ್ಲಿ ಮನವಿ ಮಾಡಿಕೊಂಡರು.
ಇದನ್ನೂ ಓದಿ: ವಿಜಯಪುರ : ಜಿಲ್ಲಾಸ್ಪತ್ರೆಯಲ್ಲಿ ಮುಂದುವರೆದ ಬಾಣಂತಿಯರ ಗೋಳು