ಚಿಕ್ಕಬಳ್ಳಾಪುರ: ಕುರಿ ಮೇಯಿಸಲು ಹೋಗಿದ್ದ ಮಹಿಳೆಯ ಬಾಯಿಗೆ ಸೀರೆ ತುರುಕಿ ಕತ್ತು ಹಿಸುಕಿ ಕೊಲೆಗೈದ ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಗೊಲ್ಲಪಲ್ಲಿ ಗ್ರಾಮದಲ್ಲಿ ನಡೆದಿದೆ.
ಗೊಲ್ಲಪಲ್ಲಿ ಗ್ರಾಮದ ನಾರಾಯಣಪ್ಪ ಎಂಬವರ ಎರಡನೇ ಪತ್ನಿ ನರಸಮ್ಮ (38) ಕೊಲೆಯಾದವರು. ಈಕೆ ಎಂದಿನಂತೆ ಗ್ರಾಮದ ದೂರದಲ್ಲಿರುವ ನಿರ್ಜನ ಪ್ರದೇಶಕ್ಕೆ ಕುರಿಗಳನ್ನು ಮೇಯಿಸಲು ಹೋಗಿದ್ದರು. ಅದೇ ಗ್ರಾಮದ ವೆಂಕಟೇಶ (36) ಎಂಬಾತ ಕೊಲೆಯಾದ ಮಹಿಳೆಯೊಂದಿಗೆ ಈ ಹಿಂದೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎಂದು ಶಂಕಿಸಲಾಗಿದೆ.
ಕೆಲ ದಿನಗಳಿಂದ ದೂರವಾಗಿದ್ದ ವೆಂಕಟೇಶ ಮತ್ತೆ ತನ್ನ ಹಳೇ ಚಾಳಿಯನ್ನು ಮುಂದುವರಿಸಲು ನರಸಮ್ಮಗೆ ಒತ್ತಾಯಿಸಿದ್ದಾನೆ. ಇದಕ್ಕೆ ಆಕೆ ನಿರಾಕರಿಸಿದಾಗ ದವಡೆಗೆ ಬಲವಾದ ಪೆಟ್ಟು ಕೊಟ್ಟು, ಮಹಿಳೆಯ ಮೇಲೆ ಹಲ್ಲೆ ನಡೆಸಿ ಕೊಂದು ಹಾಕಿದ್ದಾನೆ. ಮೃತದೇಹವನ್ನು ಪಕ್ಕದ ಪೊದೆಗೆ ಬಿಸಾಕಿ ಏನೂ ತಿಳಿಯದಂತೆ ಊರಿನಲ್ಲಿರುವ ಮನೆಗೆ ತೆರಳಿದ್ದಾನೆ.
ಇದನ್ನೂ ಓದಿ: ಪ್ರೇಮಿಯನ್ನು ನಂಬಿ ಪೋಷಕರನ್ನು ಬಿಟ್ಟು ಬಂದ ಯುವತಿ.. ತುಂಡಾಗಿ ಕತ್ತರಿಸಿ ಬೀದಿಗಳಲ್ಲಿ ಎಸೆದ ಪ್ರಿಯಕರ!
ಸಂಜೆ ಕುರಿಗಳು ಮಾತ್ರ ಮನೆಗೆ ಬಂದಿದ್ದು, ಹೆಂಡತಿ ಬರಲಿಲ್ಲವೆಂದು ನರಸಮ್ಮನ ಪತಿ ಹಾಗೂ ಗ್ರಾಮಸ್ಥರು ಹುಡುಕಾಡಿದಾಗ ರಾತ್ರಿ 11.30 ರ ಸುಮಾರಿಗೆ ಮೃತಳ ಮಾಂಗಲ್ಯ, ಬಳೆ, ಊಟದ ಬುಟ್ಟಿ ಸಿಕ್ಕಿದೆ. ಪೊದೆಯಲ್ಲೇ ಮೃತದೇಹವೂ ದೊರಕಿದೆ. ಈ ಕುರಿತು ಚೇಳೂರು ಪೊಲೀಸರು ತನಿಖೆ ನಡೆಸಿ ವೆಂಕಟೇಶ್‍ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.