ಚಿಕ್ಕಬಳ್ಳಾಪುರ: ಪೊಲೀಸರನ್ನು ನೋಡಿ ಓಡಿಹೋದ ವ್ಯಕ್ತಿಯನ್ನು ಹಿಡಿದು ವಿಚಾರಣೆ ನಡೆಸಿದಾಗ, ಗಾಂಜಾ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ.
ಮುದ್ದಲಹಳ್ಳಿ ಗ್ರಾಮದ ಮೈಕ್ ಸೆಟ್ ಬಾಡಿಗೆ ವ್ಯಾಪಾರಿ ನಾರಾಯಣಸ್ವಾಮಿ (50) ಬಂಧಿತ ಆರೋಪಿ. ತಾಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕೊತ್ತಪಲ್ಲಿಯಿಂದ ನಿಮ್ಮಕಾಯಲಹಳ್ಳಿ ಹೋಗುವ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿರುವುದಾಗಿ ಪೊಲೀಸರಿಗೆ ಮಾಹಿತಿ ಬಂದಿದೆ. ಕೂಡಲೇ ಬಟ್ಲಹಳ್ಳಿ ಠಾಣೆಯ ಪಿಎಸ್ಐ ಪಾಪಣ್ಣ ಮತ್ತು ಸಿಬ್ಬಂದಿ ದಾಳಿ ನಡೆಸಲು ಹೋದಾಗ ರಸ್ತೆಯ ಪಕ್ಕದಲ್ಲಿದ್ದ ತೊಟ್ಟಿ ಮೇಲೆ ಇದ್ದ ನಾರಾಯಣಸ್ವಾಮಿ ಪೊಲೀಸ್ ವಾಹನವನ್ನು ನೋಡಿ ಓಡಿ ಹೋಗಿದ್ದಾನೆ.
ನಂತರ ನಾರಾಯಣಸ್ವಾಮಿಯನ್ನು ಹಿಡಿದು ವಿಚಾರಣೆ ನಡೆಸಿದ ವೇಳೆ ಗಾಂಜಾ ಮಾರಾಟದ ವಿಷಯ ಬಹಿರಂಗಗೊಂಡಿದೆ. ಸದ್ಯ ಆರೋಪಿ ಬಳಿ ಬ್ಯಾಗ್ನಲ್ಲಿದ್ದ 200 ಗ್ರಾಂ ತೂಕದ ಗಾಂಜಾ ವಶಪಡಿಸಿಕೊಂಡಿದ್ದಾರೆ. ನಾರಾಯಣಸ್ವಾಮಿ ಬಾಗೇಪಲ್ಲಿ ತಾಲೂಕು ಮುದ್ದಲಹಳ್ಳಿ ಗ್ರಾಮದ ರಾಜು ಎಂಬುವರ ಬಳಿಯಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.