ಚಿಕ್ಕಬಳ್ಳಾಪುರ: ಈ ಬಾರಿ ರಾಜ್ಯದೆಲ್ಲೆಡೆ ಬರ ಆವರಿಸಿದೆ. ಕೇಂದ್ರ ಸರ್ಕಾರ ಸೂಚಿಸಿದಂತೆ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯನ್ನಾಗಿ ಕೂಡ ಘೋಷಿಸಲಾಗಿದೆ. ಹೀಗಾಗಿ ಜಿಲ್ಲೆಯ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ .
ತಾಲೂಕಿನ ಗಡಿದಂ ವೆಂಕಟರಮಣ ದೇವಸ್ಥಾನದಲ್ಲಿ ಶಾಸಕ ಸುಬ್ಬಾರೆಡ್ಡಿ ದಂಪತಿ ಮಳೆಗಾಗಿ ಹೋಮ ಏರ್ಪಡಿಸಿ ಜಿಲ್ಲೆಯಲ್ಲಿ ಹಾಗೂ ಕ್ಷೇತ್ರದಲ್ಲಿ ಉತ್ತಮ ಮಳೆಯಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ಸದ್ಯ ಬಾಗೇಪಲ್ಲಿ ಕ್ಷೇತ್ರ ಬರಪೀಡಿತ ಕ್ಷೇತ್ರವಾಗಿರುವುದರಿಂದ ಈ ಕ್ಷೇತ್ರದ ಜನತೆಯೂ ಹೆಚ್ಚಾಗಿ ನೀರಾವರಿ ಯೋಜನೆಗಳನ್ನು ನಂಬಿಕೊಂಡಿದ್ದಾರೆ. ಆದರೆ ನೀರಾವರಿ ಯೋಜನೆಗಳು ಯಾವಾಗ ಅನುಷ್ಠಾನಕ್ಕೆ ಬರುತ್ತವೆ ಎಂಬುದು ಮಾತ್ರ ಇನ್ನೂ ಅರಿಯದ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ.
ಅದಾಗಲೇ ಜೂನ್ ಕಳೆದರೂ ರಾಜ್ಯದಲ್ಲಿ ಉತ್ತಮ ಮಳೆಯಾಗದೇ ರೈತರು ಕಂಗಾಲಾಗಿದ್ದಾರೆ. ಬಹುತೇಕರು ಹೋಮ-ಹವನಗಳ ಮೊರೆ ಹೋಗಿದ್ದಾರೆ. ಜನರ ಪೂಜೆಗೆ ಒಲಿದು ವರುಣದೇವ ಮಳೆ ಸುರಿಸುತ್ತಾನಾ ಕಾದು ನೋಡಬೇಕಿದೆ.