ಚಿಕ್ಕಬಳ್ಳಾಪುರ: ಭಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ ಸಾಕಷ್ಟು ಕೆರೆಕಟ್ಟೆಗಳು ತುಂಬಿ ಒಡೆದು ಹೋಗಿದ್ದು, ನಿನ್ನೆ ಜಿಲ್ಲಾಧಿಕಾರಿ ಆರ್.ಲತಾ ಕಾಲ್ನಡಿಗೆಯ ಮೂಲಕ ಸಂಚರಿಸಿ ಬೆಳೆಹಾನಿ ಪ್ರದೇಶವನ್ನು ಪರಿಶೀಲಿಸಿದರು.
ಶಿಡ್ಲಘಟ್ಟ ತಾಲೂಕಿನ ಗಂಜಿಕುಂಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ದೊಡ್ಡ ಬಂದ್ರಘಟ್ಟ ಮತ್ತು ಚಿಕ್ಕ ಬಂದ್ರಘಟ್ಟ ಹಾಗೂ ಗಂಜಿಕುಂಟೆ ಗ್ರಾಮಗಳನ್ನು ಸಂಪರ್ಕಿಸುವ ಸೇತುವೆ ಮಳೆ ರಭಸಕ್ಕೆ ಕೊಚ್ಚಿ ಹೋಗಿತ್ತು. ಪರಿಣಾಮ ರೈತರ ಹೊಲಗಳಿಗೆ ನೀರು ನುಗ್ಗಿ ಕೋಟ್ಯಂತರ ರೂ. ನಷ್ಟವಾಗಿದೆ.
ಬೆಳೆ ಪರಿಶೀಲನೆ ಬಳಿಕ, ದುರಸ್ತಿ ಕಾಮಗಾರಿ ಕೈಗೊಂಡು ಸುರಕ್ಷಿತ ಹಾಗೂ ಶಾಶ್ವತ ಸೇತುವೆ ನಿರ್ಮಾಣಕ್ಕೆ ತುರ್ತು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು. ಸದ್ಯಕ್ಕೆ ಕೊಚ್ಚಿಹೋದ ಕೆರೆಕಟ್ಟೆಗಳನ್ನು ಪುನಃ ನಿರ್ಮಿಸಲು ಸುಮಾರು 5 ಕೋಟಿ ರೂ. ಹಣ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್, ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ನರೇಂದ್ರ ಸ್ವಾಮಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ತಿಮ್ಮರಾಯಪ್ಪ, ಪಿ.ಆರ್.ಇ.ಡಿ ಯ ಕಾರ್ಯಪಾಲಕ ಅಭಿಯಂತರ ರಾಮಕೃಷ್ಣಪ್ಪ, ತಹಶೀಲ್ದಾರ್ ರಾಜೀವ್ ಹಾಗು ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು.