ಚಿಕ್ಕಬಳ್ಳಾಪುರ : ದೇಶದೆಲ್ಲೆಡೆ ಇಂದು ಕಾರ್ಗಿಲ್ ವಿಜಯ ದಿನ ಆಚರಿಸಿ ಹುತಾತ್ಮ ಯೋಧರ ಸ್ಮರಣೆ ಮಾಡಲಾಗುತ್ತಿದೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯಲ್ಲಿ ದೇಶಕ್ಕಾಗಿ ಪ್ರಾಣತೆತ್ತ ಯೋಧನೊಬ್ಬನ ಸ್ಮಾರಕ ಇಲಾಖೆಯ ನಿರ್ಲಕ್ಷ್ಯಕ್ಕೊಳಗಾಗಿ ಇತಿಹಾಸ ಪುಟ ಸೇರುವ ಹಂತಕ್ಕೆ ತಲುಪಿದೆ.
ತಾಲೂಕಿನ ಕೈವಾರದ ಬಿ.ಎಸ್.ಎಫ್ ಯೋಧ ಕೆಲ್.ಎಲ್.ರಮೇಶ್ 2004ರಲ್ಲಿ ಹುತಾತ್ಮರಾಗಿದ್ದರು. ಇವರ ಸ್ಮರಣಾರರ್ಥ ಕೈವಾರದ ಸರ್ಕಾರಿ ಶಾಲೆಯ ಆವರಣದಲ್ಲಿ ಸ್ಮಾರಕವನ್ನು ನಿರ್ಮಾಣ ಮಾಡಲಾಗಿದೆ. ಆದರೆ ಈಗ ಸ್ಮಾರಕ ಸೂಕ್ತ ನಿರ್ವಹಣೆಯಿಲ್ಲದೆ ಗಿಡ ಗಂಟಿಗಳಿಂದ ತುಂಬಿದ್ದು, ಹಾಳು ಕೊಂಪೆಯಂತಾಗಿದೆ.
ಸ್ಮಾರಕದ ಒಂದು ಕಡೆ ಕಸಕಡ್ಡಿ ತುಂಬಿದ್ದರೆ, ಮತ್ತೊಂದು ಕಡೆ ಗೋಣಿ ಚೀಲಗಳು ರಾಶಿ ಬಿದ್ದಿವೆ. ಸ್ಮಾರಕದ ಸುತ್ತ ಗಿಡಗಂಟಿಗಳು ಬೆಳೆದು ಸ್ಮಾರಕವನ್ನು ಸಂಪೂರ್ಣವಾಗಿ ಆವರಿಸುವ ಹಂತಕ್ಕೆ ತಲುಪಿದೆ. ಸದ್ಯ ಕಾರ್ಗಿಲ್ ವಿಜಯ ದಿನವಾದ ಇಂದು ಹುತಾತ್ಮ ಯೋಧನ ಸ್ಮಾರಕವನ್ನು ಕೈವಾರ ಶಾಲೆಯ ಮಕ್ಕಳು ಮತ್ತು ಶಿಕ್ಷಕರು ಸ್ವಚ್ಚಗೊಳಿಸಿ ಪುಷ್ಪಹಾರ ಹಾಕಿ ಗೌರವ ಸೂಚಿಸುವ ಕೆಲಸವನ್ನು ಮಾಡಿದ್ದಾರೆ.
ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೈಲಜಾ ಮಂಜುನಾಥ್ ಮಾತನಾಡಿ, ಕಳೆದ ವರ್ಷ ಕೇಂದ್ರದಿಂದ ಅಧಿಕಾರಿಗಳು ಆಗಮಿಸಿ ಗೌರವ ಅರ್ಪಿಸುವ ಕಾರ್ಯವನ್ನು ಮಾಡಿದ್ದರು. ಆದರೆ ಈ ವರ್ಷ ಯಾವುದೇ ಅಧಿಕಾರಿಗಳು ಇತ್ತ ಸುಳಿಯಲೇ ಇಲ್ಲ. ನರೇಗಾ ಯೋಜನೆಯಡಿಯಲ್ಲಿ ಸ್ಮಾರಕವನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಸಿದ್ದಪಡಿಸಿ ಅನುಮೋದನೆ ಪಡೆಯಲಾಗಿದೆ. ಏನೇ ಆಗಲಿ ನನ್ನ ಅಧಿಕಾರವದಿ ಕೊನೆಗೊಳ್ಳುವ ಮುನ್ನ ಸ್ಮಾರಕವನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಮಾಡುತ್ತೇನೆ ಎಂದು ತಿಳಿಸಿದ್ದಾರೆ