ಚಿಕ್ಕಬಳ್ಳಾಪುರ: ಬಾದಿಮರಳೂರು ವ್ಯವಸಾಯ ಸೇವಾ ಸಹಕಾರ ಸಂಘದಿಂದ ರೈತರಿಗೆ ಮೋಸ ಮತ್ತು ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲೆಯ ಗೌರಿಬಿದನೂರು ತಾಲೂಕು ಬಿಜೆಪಿ ಯುವ ಮೋರ್ಚಾ ವತಿಯಿಂದ ಪ್ರತಿಭಟನೆ ಮಾಡಲಾಯಿತು.
ತಾಲೂಕಿನ ಬೈಚಾಪುರ ಗ್ರಾಮ ಪಂಚಾಯತ್ನ ಬಾದಿಮರಳೂರು ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದ ಮುಂದೆ ಯುವ ಮೋರ್ಚಾ ಸದಸ್ಯರು ಪ್ರತಿಭಟನೆ ಮಾಡಿದ್ದಾರೆ. ಬ್ಯಾಂಕ್ನ ಅಧ್ಯಕ್ಷ ರಸೂಲ್ ಬೇಗ್ ಎಂಬುವವರು ರೈತ ಅಂಜಿನಪ್ಪ ಎಂಬುವವರಿಗೆ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಕೃಷಿ ಸಾಲ ಮಂಜೂರು ಮಾಡಿಸಿದ್ದರು. ರೈತ ಅಂಜಿನಪ್ಪನನ್ನು ಡಿಸಿಸಿ ಬ್ಯಾಂಕ್ ಬಳಿ ಕರೆದುಕೊಂಡು ಹೋಗಿ ಹಣ ಡ್ರಾ ಮಾಡುವ ಚೆಕ್ಗೆ ಸಹಿ ಮಾಡಿಸಿಕೊಂಡು, ಹಣ ನೀಡದೆ ಈಗ ಸಹಿ ಮಾಡಿರುವುದು ಸಾಲ ಮಂಜೂರು ಮಾಡುವ ದಾಖಲೆಗಳಿಗೆ ಎಂದು ಸುಳ್ಳು ಹೇಳಿ ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಬಳಿಕ ರೈತ ಅಂಜಿನಪ್ಪ ಒಂದು ವಾರದ ನಂತರ ಅಧ್ಯಕ್ಷರ ಬಳಿ ಕೇಳಿದಾಗ ಇನ್ನು ಒಂದು ವಾರ ತಿಂಗಳು ಆಗುವುದಿಲ್ಲ ಎಂದು ಸುಳ್ಳು ಹೇಳಿದ್ದಾರೆ. ಹಾಗಾಗಿ ವ್ಯವಸಾಯ ಸೇವಾ ಸಂಘದ ಅಧ್ಯಕ್ಷರ ಮೇಲೆ ಕಾನೂನು ರೀತಿ ಕ್ರಮ ಜರಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.