ಚಿಕ್ಕಬಳ್ಳಾಪುರ: ದಮ್ಮು ತಾಕತ್ ಬಗ್ಗೆ ಮಾತನಾಡುವ ಬಿಜೆಪಿ ನಾಯಕರಿಗೆ ತಡವಾಗಿ ಆದರೂ ಬುದ್ಧಿ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ನಗರದ ತಮ್ಮ ಗೃಹ ಕಚೇರಿಯಲ್ಲಿ ವಕೀಲರ ಸಂಘದ ಮಾಜಿ ಅಧ್ಯಕ್ಷ ತಮ್ಮೇಗೌಡರನ್ನ ಪಕ್ಷಕ್ಕೆ ಸೇರ್ಪಡೆ ಹಾಗು ಕಾರ್ಯಕರ್ತರ ಸಭೆ ಹಮ್ಮಿಕೊಂಡಿದ್ದರು. ಇದೇ ವೇಳೆ ಮಾತನಾಡಿದ ವೀರಪ್ಪ ಮೊಯ್ಲಿ, ಕಾಂಗ್ರೆಸ್ ಮುಖಂಡರಿಂದ ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಕಾರಣವಾಗಿದೆ ಎನ್ನುವುದು ಈಗಲಾದರೂ ಬಿಜೆಪಿಗೆ ಅರಿವಾಗಿದೆಯಾ?. ದಮ್ಮು ತಾಕತ್ತು ದೈರ್ಯದ ಬಗ್ಗೆ ಮಾತನಾಡೋ ಬಿಜೆಪಿ ಮುಖಂಡರಿಗೆ ಈಗಲಾದ್ರು ಬುದ್ಧಿ ಬಂದಂತಾಗಿದೆ. ಜಾತ್ಯತೀತ ರಾಜ್ಯದಲ್ಲಿ ಕೋಮುವಾದಿಗಳ ಆಟ ನಡೆಯೋದಿಲ್ಲ ಅನ್ನೋದಕ್ಕೆ ಮೊನ್ನೆ ಬಂದ ಫಲಿತಾಂಶವೇ ಸಾಕ್ಷಿಯಾಗಿದೆ. ಮುಂಬರುವ ಲೋಕಸಭೆ, ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲ್ಲುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯದಲ್ಲಿ ಸೋತು ಸುಣ್ಣವಾಗಿದೆ: ಬಿಜೆಪಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪಗೆ ಈಗ ಜ್ಞಾನೋದಯ ಆದಂತೆ ಇದೆ. ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಹೋದ ಮುಖಂಡರಿಂದಲೇ ಬಿಜೆಪಿ ರಾಜ್ಯದಲ್ಲಿ ಸೋತು ಸುಣ್ಣವಾಗಿದೆ. ಅವರಲ್ಲಿ ಶಿಸ್ತಿಲ್ಲ. ಆಪರೇಷನ್ ಕಮಲವೇ ತಮ್ಮ ಸೋಲಿಗೆ ಕಾರಣ ಎಂದು ಹೇಳಿಕೊಂಡಿದ್ದಾರೆ. ಅದು ನಿಜವೇ?. ಅವರನ್ನ ಸೇರಿಸಿಕೊಳ್ಳುವ ಮೊದಲು ಈ ಬುದ್ಧಿ ನಿಮಗಿರಬೇಕಿತ್ತು. ಇಷ್ಟಾದರೂ ನಿಮ್ಮ ಮುಖಂಡರು ದಮ್ಮು, ತಾಕತ್ತು ಧೈರ್ಯದ ಬಗ್ಗೆ ಮಾತಾಡ್ತರೆ. ಅಷ್ಟೊಂದು ಮಾತಾಡೋರು ಯಾಕ್ರಿ ಸೋತ್ರಿ ಎಂದು ಮೊಯ್ಲಿ ಕುಟುಕಿದರು.
ಇದೇ ವೇಳೆ ಪಾಟ್ನಾದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಪಕ್ಷ ಕರೆ ನೀಡಿದಂತೆ ಜಾತ್ಯತೀತ ಪಕ್ಷಗಳು ಒಗ್ಗೂಡಿದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನ ಖಂಡಿತವಾಗಿಯೂ ಮನೆಗೆ ಕಳುಹಿಸಬಹುದು. ಕೇಂದ್ರದಲ್ಲಿಯೂ ಈ ಬಾರಿ ಕಾಂಗ್ರೆಸ್ ಗೆಲ್ಲುತ್ತೆ ಎಂದು ಮೊಯ್ಲಿ ಭವಿಷ್ಯ ನುಡಿದರು.
ಇದನ್ನೂ ಓದಿ: 'ಹೇಳಿಕೆ ನೀಡುವವರ ವಿರುದ್ಧ ಶಿಸ್ತು ಕ್ರಮ': ಬಿಜೆಪಿ ಮುಖಂಡರಿಗೆ ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ
ಈ ಬಾರಿ ಪಕ್ಷವೇ ಮತ್ತೆ ನನಗೆ ಟಿಕೆಟ್ ಕೊಡುತ್ತೆ: ಇನ್ನು, ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಯಾಗಿ ರಕ್ಷಾ ರಾಮಯ್ಯ ಹೆಸರು ಕೇಳಿಬರುತ್ತಿದೆ ಎಂದು ಕೇಳಿದ ಪ್ರಶ್ನೆಗೆ ಆಕಾಂಕ್ಷಿಗಳು ಎಷ್ಟೋ ಜನ ಇರ್ತಾರೆ. ಆದ್ರೆ ನಾನು ಆಕಾಂಕ್ಷಿಯಲ್ಲಿ ಕಳೆದ ಬಾರಿಯೂ ಆಕಾಂಕ್ಷಿಯಾಗಿರಲಿಲ್ಲ. ಪಕ್ಷವೇ ನನಗೆ ನನ್ನನ್ನ ಗುರುತಿಸಿ ಟಿಕೆಟ್ ಕೊಟ್ಟಿತ್ತು. ಹಾಗಾಗಿ ಈ ಬಾರಿ ಪಕ್ಷವೇ ಮತ್ತೆ ನನಗೆ ಟಿಕೆಟ್ ಕೊಡುತ್ತೆ ಎಂದರು.
ಸಭೆಯಲ್ಲಿ ಮಾಜಿ ಶಾಸಕರು ಎಸ್ ಎಂ ಮುನಿಯಪ್ಪ, ಶಿವಾನಂದ, ಮುಖಂಡರು ಕಣಜೇನಹಳ್ಳಿ ಜಯರಾಮ್, ನಂದಿ ಎಂ. ಆಂಜಿನಪ್ಪ, ರಾಮಿರೆಡ್ಡಿ, ಲಾಯರ್ ನಾರಾಯಣಸ್ವಾಮಿ, ನಗರಸಭಾ ಸದಸ್ಯ ರಫೀಕ್, ವಕೀಲ ವಿನೋದ್ ಕುಮಾರ್, ಪುರದಗಡ್ಡೆ ಕೃಷ್ಣಪ್ಪ ಇತರರು ಹಾಜರಿದ್ದರು.