ಚಿಕ್ಕಬಳ್ಳಾಪುರ: ಬಾಸ್ಕೆಟ್ ಬಾಲ್ ಕ್ರೀಡೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿಗೆ ಶತಮಾನಗಳ ಇತಿಹಾಸವಿದೆ ಎಂದರೆ ನಂಬಲೇಬೇಕು. ಇದಕ್ಕೆಲ್ಲಾ ಕಾರಣಕರ್ತರು ತಾಲೂಕಿನ ಬಾಸ್ಕೆಟ್ ಬಾಲ್ ದಿಗ್ಗಜ ಜೆ ಪಿ ಕಂಬಯ್ಯ.
ತಾಲೂಕಿನಲ್ಲಿ 1970 ರಲ್ಲಿ ಪಿನಾಕಿನಿ ಸ್ಪೋರ್ಟ್ಸ್ ಕ್ಲಬ್ ಸ್ಥಾಪಿಸಿ ನೂರಾರು ಬಾಸ್ಕೆಟ್ ಬಾಲ್ ಕ್ರೀಡಾ ಪಟುಗಳನ್ನು ಹೊರತಂದು ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಹೆಚ್ಚಿಸಿದ್ದು ಇವರ ಹಿರಿಮೆ.
ಸದ್ಯ ಜಿಲ್ಲೆಗೆ ಸೇರಿದ ಬಾಸ್ಕೆಟ್ ಬಾಲ್ ಕ್ರೀಡಾಪಟು ಗಿರೀಶ್, ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಕ್ರೀಡಾಪಟುಗಳನ್ನು ಕಳುಹಿಸಿಕೊಟ್ಟು ಗಮನ ಸೆಳೆದಿದ್ದಾರೆ. ಜೋರ್ಡನ್ನ ಅಮ್ಮಾನ್ನಲ್ಲಿ ಸೆ. 27 ರಿಂದ ಅಕ್ಟೋಬರ್ 3 ರವರೆಗೆ ಪೀಬಾ ಮಹಿಳಾ ಏಷಿಯನ್ ಕ್ಲಬ್ ಬಾಸ್ಕೇಟ್ ಬಾಲ್ ಚಾಂಪಿಯನ್ಶಿಪ್ ಜರುಗಲಿದೆ. ಇಲ್ಲಿಗೆ ಗಿರೀಶ್ ಅವರ ಮಾರ್ಗದರ್ಶನದಲ್ಲಿ ತರಬೇತಿಯನ್ನು ಪಡೆದ ಶಿವಮೊಗ್ಗದ ಸಹನಾ ಹಾಗೂ ಮೈಸೂರಿನ ನವನೀತ ಪಟ್ಟೇಮನೆ ಆಯ್ಕೆಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ.

ಆಚಾರ್ಯ ವಿದ್ಯಾ ಸಂಸ್ಥೆಯಲ್ಲಿ ದಶಕಗಳ ಕಾಲ ದೈಹಿಕ ಶಿಕ್ಷಕರಾಗಿದ್ದ ಜೆ. ಪಿ ಕಂಬಯ್ಯ ತಾಲೂಕಿನ ಹೆಮ್ಮೆಯ ಶಿಕ್ಷಕರಾಗಿದ್ದರು. ಇಂತಹ ವ್ಯಕ್ತಿಯ ಗರಡಿಯಲ್ಲಿ ಪಳಗಿದ ಮತ್ತೊಬ್ಬ ಪ್ರತಿಭಾವಂತ ಕ್ರೀಡೆಯ ಸಾಧಕ ಗೌರಿಬಿದನೂರು ತಾಲೂಕಿನ ಗಿರೀಶ್ ಅವರಾಗಿದ್ದಾರೆ. ಚಿಕ್ಕಂದಿನಿಂದಲೂ ಬಾಸ್ಕೆಟ್ ಬಾಲ್ ಕ್ರೀಡಾ ಸ್ಫೂರ್ತಿ ಉಳ್ಳ ವ್ಯಕ್ತಿಯಾಗಿದ್ದಾರೆ. ತನ್ನ ಗುರುಗಳು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಾಗಿ ಇಂದು ತಮ್ಮ ಪ್ರತಿಭೆಯ ಮೂಲಕ ಈ ದೇಶಕ್ಕೆ ಅತ್ಯುತ್ತಮ ಪ್ರತಿಭಾವಂತ ಕ್ರೀಡಾಪಟುಗಳನ್ನು ಸಜ್ಜುಗೊಳಿಸಿದ್ದಾರೆ.

ಸದ್ಯ ಗಿರೀಶ್ ಅವರು ಮೈಸೂರು ಸ್ಪೋರ್ಟ್ಸ್ ಹಾಸ್ಟೆಲ್ ಕ್ಲಬ್ನಲ್ಲಿ ದೈಹಿಕ ತರಬೇತುದಾರರಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ, ತಮ್ಮ ಬದುಕಿನುದ್ದಕ್ಕೂ ತಾನು ಕಲಿತ ಕ್ರೀಡಾ ವಿದ್ಯೆಯನ್ನು ಇನ್ನೊಬ್ಬರಿಗೆ ಕಲಿಸುತ್ತಾ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.
ಗಿರೀಶ್ ಅವರು ಪಿನಾಕಿನಿ ಸ್ಪೋರ್ಟ್ಸ್ ಕ್ಲಬ್ ಸದಸ್ಯರಾಗಿದ್ದಾರೆ. ರಾಜ್ಯ ಹಾಗೂ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಿಲ್ಲೆಯ ಗೌರಿಬಿದನೂರು ತಾಲೂಕಿಗೆ ಅಪಾರವಾದ ಕೀರ್ತಿಯನ್ನು ತಂದಿದ್ದಾರೆ. 1982 ರಲ್ಲಿ ಗೌರಿಬಿದನೂರು ತಾಲೂಕಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಶ್ರೀಲಂಕಾ ಹಾಗೂ ಭಾರತದ ನಡುವೆ ಬಾಸ್ಕೆಟ್ ಬಾಲ್ ಪಂದ್ಯಾವಳಿ ನಡೆದಿದೆ. ಇದರಲ್ಲಿ ಭಾರತ ವಿಜಯ ಪತಾಕೆ ಹಾರಿಸಿತ್ತು.

ಜಿ ಪಿ ಕೆ ಅವರ ಗರಡಿಯಲ್ಲಿ ಸುಮಾರು 150 ಕ್ಕೂ ಹೆಚ್ಚು ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ್ದಾರೆ. ಸದ್ಯ ಗೌರಿಬಿದನೂರು ತಾಲೂಕು ಬಾಸ್ಕೆಟ್ ಬಾಲ್ ಕ್ರೀಡೆಗೆ ಇಷ್ಟೊಂದು ಹೆಗ್ಗಳಿಕೆಗೆ ಪಾತ್ರವಾಗಿದ್ದರೂ ತಾಲೂಕಿನಲ್ಲಿ ಇಂದು ಬಾಸ್ಕೆಟ್ ಬಾಲ್ ಕ್ರೀಡೆಗೆ ಯಾವುದೇ ಗುರುತುಗಳು ಇಲ್ಲದಂತಾಗಿದೆ. ಸದ್ಯ ಜಿಲ್ಲೆಯಲ್ಲಿ ಪ್ರಭಾವಿ ರಾಜಕೀಯ ವ್ಯಕ್ತಿಗಳಿದ್ದರೂ ಕ್ರೀಡೆಗೆ ಪ್ರೋತ್ಸಾಹ ನೀಡದಿರುವುದು ಜಿಲ್ಲೆಯ ಜನತೆಗೆ ಬೇಸರವನ್ನುಂಟು ಮಾಡಿದೆ.
ಓದಿ: ಆನೇಕಲ್ನ ರೇವ್ ಪಾರ್ಟಿ ಸ್ಥಳಕ್ಕೆ ಎಸ್ಪಿ ವಂಶಿ ಕೃಷ್ಣ ಭೇಟಿ, ಪರಿಶೀಲನೆ