ಬಾಗೇಪಲ್ಲಿ: ತಾಲೂಕು ಕೇಂದ್ರದಿಂದ ಕಾರಕೂರು ಕ್ರಾಸ್ ಮೂಲಕ ಯಲ್ಲಂಪಲ್ಲಿ, ಕಾನಗಮಾಕಲಪಲ್ಲಿ, ಮಿಟ್ಟೇಮರಿವರೆಗೆ 15 ಕಿಲೋ ಮೀಟರ್ ರಸ್ತೆ ಕಿರಿದಾಗಿದ್ದು, ಗುಂಡಿಗಳು ನಿರ್ಮಾಣವಾಗಿವೆ. ಹೀಗಾಗಿ ಮಳೆ ಬಂದಾಗ ಸಂಚಾರಕ್ಕೆ ಅಡ್ಡಿಯಾಗುತ್ತದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ವಿಸ್ತರಣೆ ಆಗದಿರುವುದರಿಂದ ಒಮ್ಮೆ ಒಂದು ವಾಹನ ಮಾತ್ರ ಸಂಚರಿಸಲು ಸಾಧ್ಯ. ಎದುರಿನಿಂದ ಮತ್ತೊಂದು ವಾಹನ ಬಂದರೆ ರಸ್ತೆ ಬಿಟ್ಟು ಪಕ್ಕಕ್ಕೆ ತೆರಳಬೇಕು. ಇದರಿಂದಾಗಿ ವಾಹನ ಸವಾರರು ಕಿರಿಕಿರಿ ಅನುಭವಿಸುತ್ತಿದ್ದಾರೆ.
ಇದು ರಾಜ್ಯ ಹೆದ್ದಾರಿಯಾಗಿರುವುದರಿಂದ ವಾಹನ ಸಂಚಾರ ಹೆಚ್ಚಾಗಿರುತ್ತದೆ. ಯಲ್ಲಂಪಲ್ಲಿ, ಮಿಟ್ಟೇಮರಿ, ಸಾದಲಿ, ದಿಬ್ಬೂರಹಳ್ಳಿ ಸಂತೆಗಳಲ್ಲಿ ಮಾರಾಟ ಮಾಡುವ ದಿನಸಿ, ತರಕಾರಿಗಳನ್ನು ಸಾಗಿಸಲು ವ್ಯಾಪಾರಸ್ಥರು ಹರಸಾಹಸ ಪಡುತ್ತಿದ್ದಾರೆ. ಯಲ್ಲಂಪಲ್ಲಿ, ಮಿಟ್ಟೇಮರಿ ಗ್ರಾಮದ ಕೆರೆ ಕಟ್ಟೆಗಳ ಇಕ್ಕೆಲಗಳಲ್ಲಿ ಯಾವುದೇ ತಡೆಗೋಡೆ ಅಥವಾ ಕಂಬಿ ಹಾಕಿಲ್ಲ. ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ ಎಂದರು.