ಬಾಗೇಪಲ್ಲಿ( ಚಿಕ್ಕಬಳ್ಳಾಪುರ): ಬಡತನದಲ್ಲಿರುವ ಹೆಣ್ಣು ಮಕ್ಕಳ ಅಜ್ಞಾನವನ್ನು ದುರ್ಬಳಕೆ ಮಾಡಿಕೊಂಡ ಮೈಕ್ರೋ ಫೈನಾನ್ಸ್ಗಳು ಅಧಿಕ ಬಡ್ಡಿಯನ್ನು ನಿಗದಿ ಮಾಡಿ ಮೋಸ ಮಾಡುತ್ತಿವೆ. ಕೂಲಿ ಕಾರ್ಮಿಕರನ್ನು ಶೋಷಣೆ ಮಾಡುತ್ತಿವೆ ಎಂದು ಕನ್ನಡ ಸೇನೆ ಮಾಜಿ ಜಿಲ್ಲಾ ಅಧ್ಯಕ್ಷ ಬಾಬಾಜಾನ್ ಆರೋಪಿಸಿದರು.
ಇದರಿಂದಾಗಿ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಜನರ ಬದುಕು ಮುಳುಗಿ ಹೋಗುತ್ತಿದೆ. ಆದ್ದರಿಂದ ಸರ್ಕಾರವೇ ಮುಂದೆ ನಿಂತು ಇಂತಹ ಮೈಕ್ರೋ ಫೈನಾನ್ಸ್ಗಳ ವಿರುದ್ಧ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪಟ್ಟಣದ ತಹಶೀಲ್ದಾರರ ಕಚೇರಿ ಮುಂದೆ ಬಾಗೇಪಲ್ಲಿ ತಾಲೂಕು ಕನ್ನಡ ಸೇನೆ ಸಂಘಟನೆಯ ವತಿಯಿಂದ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರೀಕೃತ ಬ್ಯಾಂಕುಗಳು ಕಳ್ಳರಿಗೆ ಕೋಟ್ಯಂತರ ರೂ. ಸಾಲ ನೀಡುತ್ತಾರೆ. ಆದರೆ ಬಡವ ತನ್ನ ಬದುಕನ್ನು ಕಟ್ಟಿಕೊಳ್ಳಲು ಸಾಲವನ್ನು ನೀಡಲು ಹಿಂದೇಟು ಹಾಕುತ್ತವೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡು ಮೈಕ್ರೋ ಫೈನಾನ್ಸ್ ದಾಖಲೆ ಪಡೆಯದೇ ಸುಲಭವಾಗಿ ಅಧಿಕ ಬಡ್ಡಿ ದರ ವಿಧಿಸಿ ಸಾಲ ಕೊಡುತ್ತಿವೆ.
ನಂತರ ಈ ಬಡವರ, ಕೂಲಿ ಕಾರ್ಮಿಕರ ಪ್ರಾಣವನ್ನು ಸಂಸ್ಥೆಗಳು ಹಿಂಡುತ್ತಿವೆ. ಗೂಂಡಾಗಳನ್ನು ಮಹಿಳೆಯರ ಮನೆ ಬಾಗಿಲಿಗೆ ಕಳುಹಿಸಿ ದೌರ್ಜನ್ಯ ಎಸಗುತ್ತಾರೆ. ರಾತ್ರಿ ವೇಳೆ, ಮಹಿಳೆಯರ ಮನೆಗಳಿಗೆ ನುಗ್ಗಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಈ ಪೈನಾನ್ಸ್ಗಳು ರಾಷ್ಟ್ರೀಕೃತ, ಖಾಸಗಿ ಬ್ಯಾಂಕ್‍ಗಳಿಂದ ಕಡಿಮೆ ಬಡ್ಡಿಗೆ ಸಾಲ ತಂದು ಬಡವರಿಗೆ ಹೆಚ್ಚಿನ ಬಡ್ಡಿದರದಲ್ಲಿ ಸಾಲ ನೀಡುತ್ತಿವೆ. ಅಲ್ಲದೇ ಯಾವುದೇ ಜಾಮೀನು ಇಲ್ಲದೇ ಸಾಲ ನೀಡುತ್ತ ಅಕ್ರಮವಾಗಿ ಬಡ್ಡಿ ದಂಧೆ ಮಾಡುತ್ತಿವೆ ಎಂದರು.
ಬಾಗೇಪಲ್ಲಿ ತಾಲೂಕು ಕನ್ನಡ ಸೇನೆ ಅಧ್ಯಕ್ಷ ರವೀಂದ್ರ ಮಾತನಾಡಿ, ಕಳೆದ ನಾಲ್ಕು ವರ್ಷಗಳಲ್ಲಿ ಈ ಸಂಸ್ಥೆಗಳು ಬೇರೆ ಬೇರೆ ಹೆಸರುಗಳಲ್ಲಿ ಗ್ರಾಮೀಣ ಭಾಗದ ಬಡ ಮಹಿಳೆಯರನ್ನು ಸಂಘಟಿಸಿ ಸಾಲದ ಮೇಲೆ ಸಾಲ ನೀಡುತ್ತಾ ಹೆಚ್ಚು ಬಡ್ಡಿ ವಸೂಲಿ ಮಾಡುತ್ತಿದ್ದಾರೆ. ಮಹಿಳೆಯರು ಸಾಲದ ಕೂಪದಿಂದ ಹೊರ ಬರಲಾಗದೇ ಪರಿತಪಿಸುತ್ತಿದ್ದಾರೆ.
ಸಕಾಲದಲ್ಲಿ ಸಾಲ ಬಡ್ಡಿ ಕಟ್ಟದ ಮಹಿಳೆಯರ ಮನೆಗಳಿಗೆ ವಸೂಲಿಗೆ ಬರುವ ಸಂಸ್ಥೆಗಳ ಸಿಬ್ಬಂದಿ ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಬೆದರಿಸುವುದು, ಬ್ಲಾಕ್‍ಮೇಲ್ ಮಾಡುವುದು, ರಾತ್ರಿ ವೇಳೆ ಮನೆಗಳಿಗೆ ನುಗ್ಗಿ ಗಲಾಟೆ ಮಾಡಿ ದೌರ್ಜನ್ಯ ಎಸಗುತ್ತಿದ್ದಾರೆ. ಇವರ ದೌರ್ಜನ್ಯಗಳನ್ನು ಎದುರಿಸಲಾಗದೇ ಮಹಿಳೆಯರು ಮಾನಸಿಕವಾಗಿ ಕೊರಗುವಂತಾಗಿದೆ ಎಂದು ಅವರು ಸಭೆಯಲ್ಲಿ ಆರೋಪಿಸಿದರು.
ಬೀದಿ ವ್ಯಾಪಾರಸ್ಥರ ಮಹಿಳಾ ಸಂಘಟನೆಯ ಶಂಕರಮ್ಮ ಮಾತನಾಡಿ, ಅನಾವೃಷ್ಟಿಯಿಂದಾಗಿ ದುಡಿಯುವ ಕೂಲಿ ಕಾರ್ಮಿಕ ವರ್ಗದ ಮಹಿಳೆಯರಿಗೆ ಕೆಲಸ ಸಿಗುತ್ತಿಲ್ಲ. ಇದರಿಂದಾಗಿ ಸಾಲ ಮರುಪಾವತಿ ಮಾಡುತ್ತಿಲ್ಲ. ರಾಜ್ಯ ಸರಕಾರ ಇದನ್ನು ಪರಿಶೀಲಿಸಿ ಕಿರುಹಣ ಕಾಸು ಸಂಸ್ಥೆಗಳಿಂದ ಬಡ ಮಹಿಳೆಯರು ಪಡೆದಿರುವ ಸಾಲಮನ್ನಾ ಮಾಡಬೇಕು.
ಮಹಿಳೆಯರ ಸ್ವಸಹಾಯ ಸಂಘಗಳಿಗೆ ಉತ್ತೇಜನ ನೀಡಿ ಬ್ಯಾಂಕ್‍ಗಳ ಮೂಲಕ ಸಾಲ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿದರು.