ಬಾಗೇಪಲ್ಲಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಅಧ್ಯಕ್ಷರಾಗಿ ಬಿಜೆಪಿಯ ಗೊರ್ತಪಲ್ಲಿ ಪಂಚಾಯಿತಿಯ ಬೊಯಿಪಲ್ಲಿ ಮತ ಕ್ಷೇತ್ರದ ಸೋಮಶೇಖರ ರೆಡ್ಡಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಆರ್.ಅಂಜನಪ್ಪ ಆಯ್ಕೆಯಾಗಿದ್ದಾರೆ.
ನಿನ್ನೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸೋಮಶೇಖರ ರೆಡ್ಡಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಆರ್.ಅಂಜನಪ್ಪ ನಾಮಪತ್ರ ಸಲ್ಲಿಸಿದ್ದರು.
ಸಭೆಗೆ 16 ಸದಸ್ಯರಲ್ಲಿ 15 ಜನ ಉಪಸ್ಥಿತರಿದ್ದು, ಒಬ್ಬರು ಗೈರು ಹಾಜರಾಗಿದ್ದರು. ಬೋಯಿಪಲ್ಲಿ ಸೋಮಶೇಖರ ರೆಡ್ಡಿ ಅವರಿಗೆ 8 ಮತಗಳು ಲಭಿಸಿದರೆ, ಅವರ ಪ್ರತಿಸ್ಪರ್ಧಿ ಜಿ.ಎಸ್. ರಾಮಚಂದ್ರಪ್ಪ 7 ಮತಗಳನ್ನು ಪಡೆದುಕೊಂಡರು. ಒಂದು ಮತದ ಅಂತರದಿಂದ ಸೋಮಶೇಖರ ರೆಡ್ಡಿ ಅಧ್ಯಕ್ಷರಾಗಿ ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಪಕ್ಷದ ಕೆ.ಆರ್.ಅಂಜನಪ್ಪ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾ ಅಧಿಕಾರಿಯಾಗಿ ಬಾಗೇಪಲ್ಲಿ ತಾಲೂಕು ತಹಶೀಲ್ದಾರ್ ಎಂ.ನಾಗರಾಜು ಕಾರ್ಯನಿರ್ವಹಿಸಿ, ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಘೋಷಿಸಿದರು. ನಂತರ ಬಿಜೆಪಿ ಮುಖಂಡರು, ಕಾರ್ಯಕರ್ತರು ಸಂಭ್ರಮದಿಂದ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.