ಬಾಗೇಪಲ್ಲಿ : ಮುಂದಿನ ವಿಧಾನಸಭೆ ಚುನಾವಣೆ ತನಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraja Bommai) ಬದಲಾವಣೆ ಇಲ್ಲ. ಸಿಎಂ ಬದಲಾವಣೆ (cm change issue) ಎನ್ನುವುದು ಕಾಂಗ್ರೆಸ್ ಪಕ್ಷ ಹುಟ್ಟು ಹಾಕಿದ ರಾಜಕೀಯ ಕುತಂತ್ರ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ (State BJP Vice-President B. Y Vijayendra) ಹೇಳಿದರು.
ಬಾಗೇಪಲ್ಲಿ ತಾಲೂಕಿನ ಗೂಳೂರಿನಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಮುನ್ನ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. 'ಬಿಟ್ ಕಾಯಿನ್ ಹಗರಣದ ಬಗ್ಗೆ ಸೂಕ್ತ ತನಿಖೆಯಾಗಬೇಕಿದೆ. ಅನಂತರ ಸತ್ಯಾಸತ್ಯತೆ ಹೊರ ಬರಲಿದೆ.
ಆದರೆ, ಕಾಂಗ್ರೆಸ್ ಪಕ್ಷದವರು ವಿನಾ ಕಾರಣ ಈ ಹಗರಣದಲ್ಲಿ ಸಿಎಂ ಬೊಮ್ಮಾಯಿ ಅವರ ಹೆಸರನ್ನು ಬಳಸುತ್ತಿದ್ದಾರೆ. ಇದು ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿದೆ' ಎಂದರು. 'ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಹೀಗೆ ಆರೋಪಗಳನ್ನು ಮಾಡುತ್ತಾ ರಾಜ್ಯದ ಜನರಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ.
ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಯಶಸ್ಸು ಕಾಣಬೇಕು ಎಂಬ ಉದ್ದೇಶದಿಂದ ಈ ರೀತಿಯ ಹುನ್ನಾರ ಮಾಡುತ್ತಿದ್ದಾರೆ' ಎಂದು ಕಿಡಿಕಾರಿದರು. ಈಗಾಗಲೇ ಕಾಂಗ್ರೆಸ್ ಪಕ್ಷದವರು ಹತಾಶರಾಗಿದ್ದಾರೆ. ಅವರಿಗೆ ಯಾವ ರೀತಿ ಮುಂದೆ ಸಾಗಬೇಕು, ಯಾವ ರೀತಿ ಬಿಜೆಪಿಯನ್ನು ಎದುರಿಸಬೇಕು ಎಂಬ ಬಗ್ಗೆ ದಾರಿ ತೋಚುತ್ತಿಲ್ಲ.
ಹೀಗಾಗಿ, ದಿನಬೆಳಗಾದರೆ ಬಿಟ್ ಕಾಯಿನ್ ಎಂಬ ಪದವನ್ನು ಬಳಸುತ್ತಿದ್ದಾರೆ. ಈ ಮೂಲಕ ಬಿಜೆಪಿಯನ್ನು ಎದುರಿಸಬಹುದು ಅಂದುಕೊಂಡಿದ್ದಾರೆ. ಆದರೆ, ಅವರ ತಂತ್ರ ಯಶಸ್ಸು ಕಾಣುವುದಿಲ್ಲ ಎಂದರು.
ಓದಿ: ಬಿಟ್ಕಾಯಿನ್ ಪ್ರಕರಣದಲ್ಲಿ ಇರುವವರ ಹೆಸರು ಸರ್ಕಾರಕ್ಕೆ ಗೊತ್ತಾಗಬೇಕು, ಆಗಲ್ಲ ಅಂದ್ರೆ ಅಧಿಕಾರ ಬಿಡಲಿ: ಸಿದ್ದರಾಮಯ್ಯ