ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ಪಟ್ಟಣ ಹೊರವಲಯದ ಪಾತಬಾಗೇಪಲ್ಲಿ ಬಳಿಯ ನಿರ್ಜನ ಪ್ರದೇಶದಲ್ಲಿ ಬಾಲಕಿಯ ಮೇಲೆ ಮೂವರು ಅತ್ಯಾಚಾರ ನಡೆಸಲು ಯತ್ನಿಸಿರುವ ಘಟನೆ ನಡೆದಿದೆ. ಸ್ಥಳೀಯರು ಬಾಲಕಿಯನ್ನು ರಕ್ಷಿಸಿ ಆರೋಪಿಗಳನ್ನು ಹಿಡಿದಿದ್ದಾರೆ. ಸೋಮವಾರ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುಗಿಸಿದ ವಿದ್ಯಾರ್ಥಿನಿ ತನ್ನ ಪ್ರಿಯಕರನ ಜೊತೆ ಪಾತಬಾಗೇಪಲ್ಲಿ ಬಳಿಯ ನಿರ್ಜನ ಪ್ರದೇಶದಲ್ಲಿ ತೆರಳಿದ್ದಾಳೆ.
ಈ ವೇಳೆ ಬಾಲಕಿಯ ಪ್ರಿಯಕರನ ಸ್ನೇಹಿತ ಕೂಡ ಅದೇ ಸ್ಥಳಕ್ಕೆ ಬಂದಿದ್ದಾನೆ. ಬಳಿಕ ಅಲ್ಲಿಯೇ ಇದ್ದ ಇನ್ನಿಬ್ಬರಾದ ನಾಗರಾಜು, ಸುರೇಶ್ ಜೊತೆ ಸೇರಿ ಇಬ್ಬರ ಖಾಸಗಿ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ. ಬಳಿಕ ಅದನ್ನು ಅವರಿಗೆ ತೋರಿಸಿ ಬಾಲಕಿ ತಮಗೂ ಸಹಕರಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಈ ವೇಳೆ ಬಾಲಕಿ ಮತ್ತು ಆಕೆಯ ಪ್ರಿಯಕರ ವಿರೋಧಿಸಿದ್ದಾರೆ. ಈ ವೇಳೆ ಒತ್ತಾಯಪೂರ್ವಕವಾಗಿ ಮೈಮೇಲೆರಗಿದಾಗ ಅಲ್ಲಿಂದ ಓಡಿ ಹೋದ ಪ್ರಿಯಕರ ಅಲ್ಲಿಯೇ ಇದ್ದ ಜನರಿಗೆ ಮಾಹಿತಿ ತಿಳಿಸಿದ್ದಾನೆ.
ತಕ್ಷಣವೇ ನಿರ್ಜನ ಪ್ರದೇಶಕ್ಕೆ ಬಂದ ಜನರು ಮೂವರು ಕಾಮುಕರನ್ನು ಹಿಡಿದು ಬಾಲಕಿಯನ್ನು ರಕ್ಷಿಸಿದ್ದಾರೆ. ನಂತರ ಬಾಲಕಿ, ಪ್ರಿಯಕರ ಸೇರಿದಂತೆ ಮೂವರು ಆರೋಪಿಗಳನ್ನು ಬಾಗೇಪಲ್ಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸದ್ಯ ಬಾಲಕಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬಾಲಕಿಯರ ಬಾಲಮಂದಿರದಲ್ಲಿ ರಕ್ಷಣೆ ನೀಡಲಾಗಿದೆ. ಪ್ರಿಯಕರ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ ಮೂವರು ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಚಿಕ್ಕಬಳ್ಳಾಪುರ ನಗರ ಠಾಣೆಗೆ ಕರೆತರಲಾಗಿದೆ.
2 ವರ್ಷಗಳಿಂದ ಬಾಲಕಿ ಆತನನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಎಸ್‍ಎಸ್‍ಎಲ್‍ಸಿಯಲ್ಲಿ ಅನುತ್ತೀರ್ಣಳಾದ ನಂತರ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದ ಬಾಲಕಿ ಸೋಮವಾರ ಪರೀಕ್ಷೆ ಬರೆಯಲು ಬಾಗೇಪಲ್ಲಿಗೆ ಬಂದಿದ್ದಳು. ಪರೀಕ್ಷೆ ಮುಗಿದ ನಂತರ ಪ್ರಿಯಕರನನ್ನು ಭೇಟಿ ಮಾಡಿದ್ದಳು.
ಇದನ್ನೂ ಓದಿ: 'ಸಹೋದರ ಘಟನಾ ಸ್ಥಳಕ್ಕೆ ಹೋಗುವ ಮುನ್ನ ಮರಣೋತ್ತರ ಪರೀಕ್ಷೆಗೆ ಅನುಮತಿ ನೀಡಲ್ಲ'