ಚಿಕ್ಕಬಳ್ಳಾಪುರ: ಬೆಳ್ಳಂಬೆಳಗ್ಗೆ ಲಾಂಗ್ನಿಂದ ವ್ಯಕ್ತಿಯೋರ್ವನ ಮೇಲೆ ಮೂವರು ದುಷ್ಕರ್ಮಿಗಳು ಹಲ್ಲೆ ಮಾಡಿ ಪರಾರಿಯಾದ ಘಟನೆ ಜಿಲ್ಲೆಯ ಹೆಚ್ ಕ್ರಾಸ್ ಬಳಿ ನಡೆದಿದೆ.
ಹೊಸಕೋಟೆ ತಾಲೂಕಿನ ತರುಬಹಳ್ಳಿ ಗ್ರಾಮದ ನಿವಾಸಿ ತ್ಯಾಗರಾಜ್ ಹಲ್ಲೆಗೊಳಗಾದ ವ್ಯಕ್ತಿ ಎಂದು ತಿಳಿದು ಬಂದಿದೆ. ತೀವ್ರ ಗಾಯಗೊಂಡಿರುವ ತ್ಯಾಗರಾಜ್ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಶಿಡ್ಲಘಟ್ಟ ತಾಲೂಕಿನ ಹೆಚ್ ಕ್ರಾಸ್ನ ಬೆಂಗಳೂರು ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇನ್ನು ಹಲ್ಲೆ ಮಾಡಿದ ವ್ಯಕ್ತಿಗಳು ಹೆಚ್ ಕ್ರಾಸ್ ನಿವಾಸಿಗಳಾಗಿದ್ದಾರೆ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಹಳೇ ವೈಷಮ್ಯದ ಹಿನ್ನೆಲೆ ಮೂವರು ವ್ಯಕ್ತಿಗಳು ಕೊಲೆಗೆ ಸಂಚು ರೂಪಿಸಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳಕ್ಕೆ ನಂದಗುಡಿ ಹಾಗೂ ಶಿಡ್ಲಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.