ಚಿಕ್ಕಬಳ್ಳಾಪುರ : ಸಿದ್ದರಾಮಯ್ಯನವರು ಮೊದಲು ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣ ನೋಡಿಕೊಳ್ಳಲಿ, ಆಮೇಲೆ ಬೇರೆಯವರ ತಟ್ಟೆಯ ನೊಣ ಹುಡುಕಲಿ ಎಂದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಕಂದಾಯ ಸಚಿವ ಆರ್. ಅಶೋಕ್ ವಾಕ್ಸಮರ ಮಾಡಿದರು.
ಇದೀಗ ಸಿದ್ದರಾಮಯ್ಯಗೆ ಸಿಕ್ಕಿರುವ ವಿರೋಧ ಪಕ್ಷ ನಾಯಕನ ಸ್ಥಾನ ಪರಮೇಶ್ವರ್ ಅಥವಾ ಹೆಚ್.ಕೆ. ಪಾಟೀಲ್ರಿಗೆ ಸಿಗಬೇಕಿತ್ತು. ಹೇಗೋ ಮಾಡಿ ಅಚಾನಕ್ಕಾಗಿ ಸಿದ್ದರಾಮಯ್ಯಗೆ ದೊರೆತಿದೆ. ಆದ್ರಿಂದ ನಾನು ವಿಪಕ್ಷ ನಾಯಕ ಎಂದು ತೋರಿಸಲು ಸಿದ್ದರಾಮಯ್ಯ ಬಿಜೆಪಿಯನ್ನ ಟೀಕಿಸುತ್ತಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಬಾಯಿ ಬಿಟ್ರೆ ಸುಳ್ಳು. ಸುಳ್ಳೇ ಸಿದ್ದರಾಮಯ್ಯ.ಈ ಮೊದಲು ಸುಳ್ಳಿನಿಂದ ಮೊಯ್ಲಿ ಸಾಧನೆ ಮಾಡಿದ್ರು. ಈಗ ಅವರನ್ನು ಮೀರಿಸಿ ಸಿದ್ದರಾಮಯ್ಯ ಸುಳ್ಳು ಹೇಳ್ತಿದ್ದಾರೆ. ನಮ್ಮಪ್ಪನಾಣೆ ಹೆಚ್‌ಡಿಕೆ, ಬಿಎಸ್‌ವೈ ಸಿಎಂ ಆಗಲ್ಲ ಅಂತಿದ್ರು. ಇಬ್ಬರೂ ಸಿಎಂ ಆಗಿಬಿಟ್ರು ಎಂದು ಸಿದ್ದುಗೆ ಅಶೋಕ್ ಟಾಂಗ್ ಕೊಟ್ಟರು.
ಬಿಎಸ್‌ವೈ ಆಡಿಯೋ ವಿವಾದದ ಬಗ್ಗೆ ಕಾಂಗ್ರೆಸ್‌ನಿಂದ ರಾಜ್ಯಪಾಲರಿಗೆ ದೂರು ವಿಚಾರವಾಗಿ ಮಾತನಾಡಿದ ಅಶೋಕ್, ದೂರು, ಟೀಕೆ ಮಾಡೋದ್ರಿಂದ ಏನೂ ಸಮಸ್ಯೆಯಾಗಲ್ಲ. ವಿರೋಧ ಪಕ್ಷದವರು ಆ ಕೆಲಸ ಮಾಡಬೇಕು ಮಾಡ್ತಾರೆ ಅಷ್ಟೇ. ಆ ರೀತಿ ನಡೆದರೆ ದೇಶದಲ್ಲಿ ಯಾವ ಸರ್ಕಾರ ಕೂಡಾ ಒಂದು ದಿನವೂ ಉಳಿಯಲು ಸಾಧ್ಯವಿಲ್ಲ ಎಂದರು.